ದೆಹಲಿ: ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಪ್ರಧಾನ ಅರ್ಚಕರ (ಮೇಲ್ಶಾಂತಿ) ಹುದ್ದೆಗೆ ಮಲಯಾಳ ಬ್ರಾಹ್ಮಣ ಸಮುದಾಯದವರು ಮಾತ್ರವೇ ಅರ್ಜಿ ಸಲ್ಲಿಸಲು ಅವಕಾಶ ನೀಡಿ ತಿರುವಾಂಕೂರು ದೇವಸ್ವಂ ಮಂಡಳಿ ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಸುಪ್ರೀಂ ಕೋರ್ಟ್ ಕೇರಳ ಸರ್ಕಾರದ ಪ್ರತಿಕ್ರಿಯೆ ಕೇಳಿದೆ.
ಅಧಿಸೂಚನೆ ಪ್ರಶ್ನಿಸಿ ದೇವಸ್ಥಾನದ ಬ್ರಾಹ್ಮಣೇತರ ಅರ್ಚಕರರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ನ್ಯಾ. ಉಜ್ಜಲ್ ಭುಯಾನ್ ಅವರಿದ್ದ ಪೀಠ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಹಾಗೂ ದೇವಸ್ಥಾನದ ಪ್ರತಿಕ್ರಿಯೆ ಸಲ್ಲಿಸಲು ನೋಟಿಸ್ ಜಾರಿ ಮಾಡುವಂತೆ ಆದೇಶಿಸಿದೆ.
ಪ್ರಧಾನ ಅರ್ಚಕ ಹುದ್ದೆಗೆ ಮಲಯಾಳ ಬ್ರಾಹ್ಮಣರನ್ನನಷ್ಟೇ ಪರಿಗಣಿಸುವುದು ಮತ್ತು ಇತರೆ ಬ್ರಾಹ್ಮಣೇತರ ಅರ್ಚಕರಿಗೆ ಅವಕಾಶ ನೀಡದಿರುವುದು ಸಂವಿಧಾನದ ವಿಧಿ 14, 15, 16, 17 ಮತ್ತು 21ಕ್ಕೆ ಕ್ಕೆ ವಿರುದ್ಧವಾಗಿದೆ ಮತ್ತು ಸಂವಿಧಾನ ನೀಡಿರುವ ಹಕ್ಕುಗಳಿಗೆ ವಿರೋಧಿಯಾಗಿದೆ ಎಂದು ಅರ್ಜಿದಾರರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ದೇವಸ್ಥಾನದ ಪ್ರಧಾನ ಅರ್ಚಕರ ಹುದ್ದೆಗೆ ಮಲಯಾಳ ಬ್ರಾಹ್ಮಣ ಸಮುದಾಯದಿಂದ ಅರ್ಜಿಗಳನ್ನು ಆಹ್ವಾನಿಸಿ ತಿರುವಾಂಕೂರು ದೇವಸ್ವಂ ಮಂಡಳಿ (ಸರ್ಕಾರಿ ಸಂಸ್ಥೆ) 2021ರ ಮೇ 27ರಂದು ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ ಕೇರಳ ಹೈಕೋರ್ಟ್ ನಲ್ಲಿ ರಿಟ್ ಅರ್ಜಿಗಳನ್ನು ಸಲ್ಲಿಸಲಾಗಿತ್ತು.
ಅಧಿಸೂಚನೆಯು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಮತ್ತು ಅಸ್ಪೃಶ್ಯತೆಗೆ ಕಾರಣವಾಗುತ್ತದೆ. ಸಂವಿಧಾನದ ವಿಧಿ 25 (ಧಾರ್ಮಿಕ ಸ್ವಾತಂತ್ರ್ಯ) ವಿಧಿ 26 (ಧಾರ್ಮಿಕ ವ್ಯವಹಾರಗಳ ನಿರ್ವಹಣೆ ಸ್ವಾತಂತ್ರ್ಯ)ಕ್ಕೆ ವಿರುದ್ಧವಾಗಿದೆ. ಹೀಗಾಗಿ ಅಧಿಸೂಚನೆ ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದರು. ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅನಿಲ್ ಕೆ. ನರೇಂದ್ರನ್ ಹಾಗೂ ನ್ಯಾ. ಪಿ.ಜಿ ಅಜಿತ್ ಕುಮಾರ್ ಅವರಿದ್ದ ವಿಭಾಗೀಯ ಪೀಠ 2024ರ ಫೆ.27ರಂದು ಅರ್ಜಿಗಳನ್ನು ತಿರಸ್ಕರಿಸಿತ್ತು.
ಅಲ್ಲದೇ, ದೇವರ ಪೂಜೆಗಾಗಿ ದೇವಸ್ಥಾನ ಪ್ರವೇಶಿಸಲು ಹಕ್ಕು ಕೇಳಬಹುದೇ ಹೊರತು ಪೂಜೆ ಮಾಡುವ ಹಕ್ಕನ್ನಲ್ಲ. ಸುಪ್ರೀಂ ಕೋರ್ಟ್ ವೆಂಕಟರಮಣ ದೇವರು ಪ್ರಕರಣದಲ್ಲಿ ಸಂವಿಧಾನದ ವಿಧಿ 25(2)(ಬಿ) ದೇವಸ್ಥಾನ ಪ್ರವೇಶಿಸುವ ಹಕ್ಕನ್ನು ರಕ್ಷಿಸುತ್ತದೆ. ಹಾಗೆಂದು ಇದು ಸಂಪೂರ್ಣ ಅನಿರ್ಬಂಧಿತ ಹಕ್ಕಲ್ಲ. 24 ಗಂಟೆಯೂ ದೇವಸ್ಥಾನದ ಬಾಗಿಲು ತೆರೆದಿಡುವಂತೆ ಕೇಳಲಾಗುವುದಿಲ್ಲವೋ ಅಂತೆಯೇ ಅರ್ಚಕರ ರೀತಿಯಲ್ಲೇ ಪೂಜಿಸುವ ಹಕ್ಕನ್ನು ಕೇಳಲಾಗದು ಎಂದಿದೆ. ಹೀಗಾಗಿ ಅರ್ಜಿದಾರರ ಮನವಿಯನ್ನು ಪರಿಗಣಿಸಲಾಗದು ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟು ಅರ್ಜಿದಾರರ ಮನವಿ ವಜಾ ಮಾಡಿತ್ತು.
ಹೈಕೋರ್ಟ್ ಮನವಿ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಇದೀಗ ಅರ್ಜಿದಾರ ಸುಜಿತ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಅರ್ಜಿ ಮುಂದಿನ ಅಕ್ಟೋಬರ್ 25ರಂದು ವಿಚಾರಣೆಗೆ ಬರಲಿದೆ.
(SPECIAL LEAVE PETITION (CIVIL) —-Diary No(s).25008/2024)
ಮೂಲ-LawTime