ಬೀದರ್: ₹ 50 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಬೀದರ್ ಬುಡಾ ಆಯುಕ್ತ ಸೇರಿ ಮೂವರನ್ನು ಲೋಕಾಯು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೃಷಿಯೇತರ ಜಮೀನಿನ (ಎನ್.ಎ) ನಿವೇಶನಗಳ ಮಾರಾಟದ ಅನುಮತಿಗಾಗಿ ₹10 ಲಕ್ಷ ನಗದು ಲಂಚ ಪಡೆಯುತ್ತಿದ್ದಾಗ ಇಲ್ಲಿನ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ (ಬುಡಾ) ಆಯುಕ್ತ ಶ್ರೀಕಾಂತ್ ಚಿಮಕೋಡೆ, ಸದಸ್ಯ ಚಂದ್ರಕಾಂತ್ ರೆಡ್ಡಿ ಹಾಗೂ ಇವರ ಆಪ್ತ ಸಿದ್ದು ಹೂಗಾರ ಈ ಮೂವರು ಶುಕ್ರವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
‘ಬೀದರ್ ನಗರದ ಚಿಕ್ಕಪೇಟೆಯಲ್ಲಿ ಸರ್ವೇ ನಂಬರ್ 26ರಲ್ಲಿ ಕೃಷಿಯೇತರ ಜಮೀನಿನ ಶೇ 60ರಷ್ಟು ನಿವೇಶನಗಳನ್ನು ಬಿಡುಗಡೆ ಮಾಡಿ, ಅವುಗಳ ಮಾರಾಟಕ್ಕೆ ಅನುಮತಿ ಕೊಡಲು ಶ್ರೀಕಾಂತ ಹಾಗೂ ಚಂದ್ರಕಾಂತ ಅವರು ₹50 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರನ್ವಯ ₹10 ಲಕ್ಷ ಮುಂಗಡ ಕೊಡುವುದರ ಬಗ್ಗೆ ಮಾತುಕತೆಯಾಗಿತ್ತು.
ಅದರಂತೆ ಬೀದರ್‌ನ ಪ್ರತಾಪ ನಗರದ ದಾಲ್‌ಮಿಲ್ ಸಮೀಪ ಶ್ರೀಕಾಂತ ಹಾಗೂ ಚಂದ್ರಕಾಂತ ಅವರ ಆಪ್ತ ಸಿದ್ದು ಹೂಗಾರ ಎಂಬಾತ ₹10 ಲಕ್ಷ ನಗದು ಪಡೆಯುತ್ತಿದ್ದಾಗ ದಾಳಿ ನಡೆಸಿ,ವಶಕ್ಕೆ ಪಡೆಯಲಾಯಿತು. ಆನಂತರ ಶ್ರೀಕಾಂತ ಹಾಗೂ
ಚಂದ್ರಕಾಂತ ಅವರನ್ನೂ ವಶಕ್ಕೆ ಪಡೆದಿದ್ದೇವೆ’ ಎಂದು
ಲೋಕಾಯುಕ್ತ ಎಸ್ಪಿ ಉಮೇಶ ಬಿ.ಕೆ. ಮಾಧ್ಯಮಕ್ಕೆ ತಿಳಿಸಿದ್ದಾರೆ.