ನವದೆಹಲಿ: ಶೇ 40ರಷ್ಟು ಅಂಗವೈಕಲ್ಯ ಹೊಂದಿದ ವ್ಯಕ್ತಿಗಳಿಗೆ ಮೀಸಲಾತಿ ನೀಡುವುದು ಹಾಗೂ ಅವರಿಗೆ ಯೋಗ್ಯವೆನಿಸುವ ಹುದ್ದೆಗಳನ್ನು ಗುರುತಿಸುವುದಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಅಂಗವಿಕಲರಿಗೆ ಮೀಸಲಾದ ಹುದ್ದೆಗಳನ್ನು ನಿಯಮಿತವಾಗಿ ಗುರುತಿಸುವುದು ಕಡ್ಡಾಯ ಹಾಗೂ ಹುದ್ದೆಗಳ ಪರಿಶೀಲನೆಗಾಗಿ ಸಮಿತಿಗಳನ್ನು ರಚಿಸಬೇಕು ಎಂದು ಮಾರ್ಗಸೂಚಿಗಳಲ್ಲಿ ಹೇಳಲಾಗಿದೆ.
ಒಂದು ಹುದ್ದೆ ಅಂಗವಿಕಲ ವ್ಯಕ್ತಿಗೆ ಸೂಕ್ತ ಎಂದು ಭಾವಿಸಿದಲ್ಲಿ, ಅದಕ್ಕೆ ಸಂಬಂಧಿಸಿದ ಬಡ್ತಿ ನೀಡಲಾಗುವ ಹುದ್ದೆಗಳನ್ನು ಕೂಡ ಅಂಗವಿಕಲರಿಗೆ ಮೀಸಲಿಡಬೇಕು ಎಂಬುದು ಸೇರಿದಂತೆ ಹಲವು ಅಂಶಗಳನ್ನು ಮಾರ್ಗಸೂಚಿ ಒಳಗೊಂಡಿದೆ.ಈ ಮಾರ್ಗಸೂಚಿಗಳನ್ನು ಅಂಗವಿಕಲರ ಹಕ್ಕುಗಳ ಕಾಯ್ದೆ- 2016ಕ್ಕೆ ಅನುಸಾರ ಸಿದ್ಧಪಡಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಅಂಗವಿಕಲರ ಹಕ್ಕುಗಳ ಕಾಯ್ದೆ-2016ರ ಸಮರ್ಪಕ ಅನುಷ್ಠಾನ ಆಗುತ್ತಿಲ್ಲ ಎಂದು ದೆಹಲಿ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. ಅಲ್ಲದೇ, ಕೇಂದ್ರೀಯ ವಿದ್ಯಾಲಯ ಸಂಘಟನೆ(ಕೆವಿಎಸ್)ಯು ಅಂಗವಿಕಲ ವ್ಯಕ್ತಿಗಳಿಗಾಗಿ ಹುದ್ದೆಗಳನ್ನು ಗುರುತಿಸುವ ವಿಚಾರದಲ್ಲಿ ಕಾನೂನಿಗೆ ವಿರುದ್ಧವಾದ ಕ್ರಮ ಕೈಗೊಂಡಿದ್ದನ್ನು ಟೀಕಿಸಿತ್ತು.
ಈ ವಿಚಾರವಾಗಿ ಅಂಗವಿಕಲರ ಸಬಲೀಕರಣ ಇಲಾಖೆಯು ಏಕರೂಪ ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದೂ ಹೈಕೋರ್ಟ್ ಸೂಚಿಸಿತ್ತು.