ಸುದ್ದಿ

500 ಉದ್ಯೋಗಿಗಳನ್ನು ವಜಾಗೊಳಿಸಿದ ಓಲಾ ಎಲೆಕ್ಟ್ರಿಕ್ ಕಂಪನಿ !

Share It

ಪ್ರಮುಖ ಎಲೆಕ್ಟಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿ ಓಲಾ ಎಲೆಕ್ಟಿಕ್ ತನ್ನ 500 ನೌಕರರನ್ನು ದಿಢೀರ್ ವಜಾಗೊಳಿಸುವ ಮೂಲಕ ಅಚ್ಚರಿ ಮೂಡಿಸಿದೆ. ತನ್ನ ಪುನಾರಚನೆಯ ಪ್ರಕ್ರಿಯೆಯ ಭಾಗವಾಗಿ ಹಾಗೂ ಮಾರಾಟದ ನಂತರದ ಸೇವೆಗಳ ವಿಷಯದಲ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಓಲಾ ಎಲೆಕ್ಟಿಕ್‌ ಕಂಪನಿ ಈ ನಿರ್ಧಾರ ಮಾಡಿರುವುದು ಗಮನಾರ್ಹ

ಜುಲೈ ತಿಂಗಳಿನಿಂದ ವಜಾಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂಬುದು ಬಹಿರಂಗಗೊಂಡಿದ್ದು ವಿವಿಧ ಇಲಾಖೆಗಳಲ್ಲಿ ವಿವಿಧ ಹಂತಗಳಲ್ಲಿ ನಿರ್ಮೂಲನೆ ಪ್ರಕ್ರಿಯೆ ನಡೆಯುತ್ತಿದೆ ಎಂಬ ಮಾಹಿತಿ ಇದೆ. ಈ ತಿಂಗಳ ಅಂತ್ಯದೊಳಗೆ ವಜಾಗೊಳಿಸುವ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಅಸ್ತಿತ್ವದಲ್ಲಿರುವ ಉದ್ಯೋಗಿಗಳನ್ನು ಸಮರ್ಥವಾಗಿ ಬಳಸಿಕೊಳ್ಳಲು ಮತ್ತು ಆ ಮೂಲಕ ಮಾರ್ಜಿನ್ ಮತ್ತು ಲಾಭದಾಯಕತೆಯನ್ನು ಹೆಚ್ಚಿಸಲು ಕಂಪನಿಯು ಉದ್ದೇಶಿಸಿದೆ ಎನ್ನಲಾಗಿದೆ.

ಇತ್ತ ಓಲಾ ಎಲೆಕ್ಟಿಕ್ ತನ್ನ ಸೇವೆಗಳಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದೆ ಎಂದು ತಿಳಿದಿದೆ. ಈ ಸಂಬಂಧ 10,000 ಕ್ಕೂ ಹೆಚ್ಚು ದೂರುಗಳನ್ನು ಸ್ವೀಕರಿಸಿದ ನಂತರ ಗ್ರಾಹಕ ಹಕ್ಕುಗಳ ನಿಯಂತ್ರಣ ಸಂಸ್ಥೆ CCPA ಕಂಪನಿಗೆ ನೋಟಿಸ್‌ ನೀಡಿದೆ. ಇದಕ್ಕೆ ಪ್ರತಿಕ್ರಿಯಿಸಿದ ಅದು ಶೇ.99ರಷ್ಟು ದೂರುಗಳನ್ನು ಪರಿಹರಿಸಲಾಗಿದೆ ಎಂದು ವಿವರಿಸಿದೆ. ಸಿಸಿಪಿಎ ಕೆಲವೇ ದಿನಗಳಲ್ಲಿ ಸಮಗ್ರ ತನಿಖೆಗೆ ಆದೇಶಿಸಿದೆ.

ಪ್ರಸ್ತುತ ಕಂಪನಿಯಲ್ಲಿ ಸುಮಾರು 4000 ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ ಮತ್ತು ವಜಾಗೊಳಿಸುವಿಕೆಯ ಪರಿಣಾಮವು ಅದರ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುವ ಜನರ ಮೇಲೆ ಕಂಡುಬರುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ. ಓಲಾ ಎಲೆಕ್ಟಿಕ್‌ನಲ್ಲಿನ ಪುನರಚನೆ ಪ್ರಕ್ರಿಯೆಯು ಡಿಸೆಂಬರ್ 2024 ರಲ್ಲಿ ಕೊನೆಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿದು ಬಂದಿದೆ.

2024-25 ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಅಂದರೆ ಸೆಪ್ಟೆಂಬರ್‌ಗೆ ಓಲಾ ಎಲೆಕ್ಟಿಕ್ ಪ್ರಕಟಿಸಿದ ಫಲಿತಾಂಶಗಳ ಪ್ರಕಾರ, ಈ ತ್ರೈಮಾಸಿಕದಲ್ಲಿ ಕಂಪನಿಯ ಆದಾಯವು 38.5 ಶೇಕಡಾ ಏರಿಕೆಯೊಂದಿಗೆ 1240 ಕೋಟಿ ರೂ. ತಲುಪಿತ್ತು. ಎರಡನೇ ತ್ರೈಮಾಸಿಕದಲ್ಲಿ ವಿತರಣೆಯಲ್ಲಿ 73.6 ಪ್ರತಿಶತದಷ್ಟು ಏರಿಕೆ ಕಂಡುಬಂದಿದೆ ಮತ್ತು ವರ್ಷದಿಂದ ವರ್ಷಕ್ಕೆ 56,813 ಯುನಿಟ್‌ಗಳಿಂದ 98,619 ಯುನಿಟ್‌ಗಳಿಗೆ ಏರಿಕೆಯಾಗಿದೆ ಎಂಬ ತಿಳಿದು ಬಂದಿದೆ.


Share It

You cannot copy content of this page