ಬೆಂಗಳೂರು: ಧಾರವಾಡ ಬಿಜೆಪಿ ಮುಖಂಡ, ಜಿಲ್ಲಾ
ಪಂಚಾಯಿತಿ ಸದಸ್ಯ ಯೋಗೀಶ್ಗೌಡ ಗೌಡರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮೊದಲ ಆರೋಪಿ ಬಸವರಾಜ ಮುತ್ತಗಿ ಮಾಫಿ ಸಾಕ್ಷಿಯಾಗಿರುವುದನ್ನು ಪರಿಗಣಿಸಿರುವ ವಿಶೇಷ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಮಾಜಿ ಸಚಿವ ವಿನಯ ಕುಲಕರ್ಣಿ ಸಲ್ಲಿಸಿರುವ ಅರ್ಜಿ ಮೇಲಿನ ಆದೇಶವನ್ನು ಹೈಕೋರ್ಟ್ ಕಾಯ್ದಿರಿಸಿದೆ.
ಈ ಅರ್ಜಿ ಕುರಿತಂತೆ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು. ವಿನಯ್ ಕುಲಕರ್ಣಿ ಪರ ವಕೀಲರಾದ ಸಿ.ವಿ.ನಾಗೇಶ್ ಆರೋಪಿ ಬಸವರಾಜ ಮುತ್ತಗಿ ಹೇಳಿಕೆಯನ್ನು ಪರಿಗಣಿಸುವಾಗ ಸೂಕ್ತ ಕಾನೂನು ಕ್ರಮಗಳ ಪಾಲನೆ ಆಗಿಲ್ಲ. ಹಾಗಾಗಿ, ಸೆಷನ್ಸ್ ಕೋರ್ಟ್ ಬಸವರಾಜ ಮುತ್ತಗಿಯನ್ನು ಮಾಫಿ ಸಾಕ್ಷಿ ಎಂದು ಪರಿಗಣಿಸಿರುವ ಕ್ರಮವನ್ನು ರದ್ದುಗೊಳಿಸಬೇಕು’ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿಬಿಐ ಪರ ವಕೀಲರು, ಬಸವರಾಜ್ ಮುತ್ತಗಿ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ – 1973ರ (ಸಿಆರ್ಪಿಸಿ) ಕಲಂ 306ರ ಅಡಿಯಲ್ಲಿ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಅನುಗುಣವಾಗಿ ಸೆಷನ್ಸ್ ನ್ಯಾಯಾಲಯ ಸಿಆರ್ಪಿಸಿ ಕಲಂ 164ರ ಅಡಿಯಲ್ಲಿ ಮಾಫಿ ಸಾಕ್ಷಿಯ ಹೇಳಿಕೆ ದಾಖಲು ಮಾಡಿಕೊಳ್ಳುವಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ನಿರ್ದೇಶಿಸಿದೆ ಎಂದರು.
ಈ ಕ್ರಮಗಳ ಪರಿಪಾಲನೆಗೂ ಮುನ್ನ ಬಸವರಾಜ ಮುತ್ತಗಿ ಪ್ರಕರಣದ ತನಿಖಾಧಿಕಾರಿಗೆ ಈ ಸಂಬಂಧ ಪತ್ರಗಳನ್ನು ಬರೆದಿದ್ದು ಅದರಲ್ಲಿ ಹಲವು ಸತ್ಯಾಂಶಗಳನ್ನು ವಿವರಿಸಿದ್ದಾರೆ. ಹೀಗಾಗಿ, 164ರ ಹೇಳಿಕೆ ದಾಖಲೆಯಲ್ಲಿ ಯಾವುದೇ ಕಾನೂನು ಪಾಲನೆಯ ಲೋಪವಾಗಿಲ್ಲ ಎಂದು ವಿಶೇಷ ನ್ಯಾಯಾಲಯದ ಕ್ರಮಗಳನ್ನು ಬಲವಾಗಿ ಸಮರ್ಥಿಸಿದರು. ವಾದ- ಪ್ರತಿವಾದ ಆಲಿಸಿದ ನ್ಯಾಯಪೀಠ ಆದೇಶ ಕಾಯ್ದಿರಿಸಿರುವುದಾಗಿ ಪ್ರಕಟಿಸಿತು
ಏನಿದು ಪ್ರಕರಣ? : ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2016ರ ಜೂನ್ 15ರಂದು ಧಾರವಾಡ ಜಿಲ್ಲೆ,ಹೆಬ್ಬಳ್ಳಿ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಬಿಜೆಪಿ ಸದಸ್ಯ ಯೋಗೀಶ್ ಗೌಡರ್ ಕೊಲೆ ನಡೆದಿತ್ತು. ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿದ್ದು, ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ.