ಬೆಂಗಳೂರು: ದಲಿತರ ಪ್ರವೇಶ ನಿರಾಕರಿಸುವ ದೇವಸ್ಥಾನ, ಕೆರೆ, ಶಾಲೆಗಳಿಗೆ ಬೀಗ ಹಾಕಿ. ನಮಗೆ ಇಲ್ಲದ್ದು ನಿಮಗೂ ಇಲ್ಲ ಎಂದು ಹೇಳಿ’ ಎಂದು ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಹೇಳಿದ್ದಾರೆ.
ರಾಜ್ಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವಕೀಲರ ಸಂಘದ ಉದ್ಘಾಟನೆ ಹಾಗೂ 75ನೇ ಸಂವಿಧಾನ ಸಮರ್ಪಣಾ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಸಂವಿಧಾನಕ್ಕೆ 75 ವರ್ಷವಾದರೂ ಜಾತಿ ಬಗ್ಗೆ ಇನ್ನೂ ಮಾತನಾಡಲಾಗುತ್ತಿದೆ. ವ್ಯಕ್ತಿಯ ಪ್ರತಿಭೆಯಿಂದ ಕೃತಜ್ಞತೆ ಸಲ್ಲಿಸುವ ಮನೋಭಾವ ಬರಬೇಕು. ಜಾತಿ, ಧರ್ಮ ನೋಡಬಾರದು. ಶೋಷಿತ ಸಮುದಾಯದವರು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ, ಭಾರತದ ರಾಷ್ಟ್ರಪತಿಯಾಗಿದ್ದಾರೆ. ಪ್ರಧಾನಿಯಾಗುವ ಕಾಲ ಬರಬೇಕು’ ಎಂದರು.
‘ಭಗವದ್ಗೀತೆ, ರಾಮಾಯಣ, ಮಹಾಭಾರತ, ವೇದಗಳನ್ನು ಮನೆಯಲ್ಲಿ ಪೂಜೆ ಮಾಡುತ್ತೇವೆ. ಆದರೆ, ಅವುಗಳನ್ನು ರಚಿಸಿದವರ ಸಮುದಾಯದವರನ್ನು ಮನೆಯೊಳಗೆ ಬಿಟ್ಟುಕೊಳ್ಳದಿರುವ ಮನಸ್ಥಿತಿ ಇನ್ನೂ ಇರುವುದು ವಿಪರ್ಯಾಸ’ ಎಂದು ಅಭಿಪ್ರಾಯಪಟ್ಟರು.