ಸುದ್ದಿ

ಬಾಲ್ಯವಿವಾಹ ಪ್ರಕರಣದಲ್ಲಿ ಪೋಷಕರ ವಿರುದ್ಧವೇ ಕ್ರಮ ಜರುಗಿಸಬೇಕು; ಹೈಕೋರ್ಟ್

Share It

ಬೆಂಗಳೂರು: ಬಾಲ್ಯ ವಿವಾಹಕ್ಕೆ ಪೋಷಕರನ್ನೆ ಹೊಣೆ ಮಾಡಬೇಕು. 18 ವರ್ಷ ತುಂಬುವ ಮುನ್ನವೆ ಬಲವಂತವಾಗಿ ಮದುವೆ ಮಾಡುವ ಪೋಷಕರ ವಿರುದ್ಧವೇ ಕಾನೂನು ಕ್ರಮ ಜರುಗಿಸಬೇಕು ಎಂದು ಕಿಡಿ ಕಾರಿರುವ ಹೈಕೋರ್ಟ್, ‘ಇಂತಹ ಪ್ರಕರಣಗಳಲ್ಲಿ ಪೋಷಕರ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸಬಾರದು ಆಗಷ್ಟೇ ಈ ಅನಿಷ್ಟ ಪದ್ಧತಿಯ ಆಚರಣೆ ಕೊನೆಗಾಣಲು ಸಾಧ್ಯ ಎಂದು ಮೌಖಿಕವಾಗಿ ಕಿಡಿ ಕಾರಿದೆ.

ಬಾಲಕಿಯನ್ನು ಮದುವೆಯಾದ ಕಾರಣಕ್ಕೆ ಆಕೆಯ ಪತಿ ಹಾಗೂ ಪೋಷಕರ ವಿರುದ್ಧ, ಪೋಕ್ಸೋ(ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ-2012) ಹಾಗೂ ಬಾಲ್ಯ ವಿವಾಹ ತಡೆ ಕಾಯ್ದೆ-2006ರ ವಿವಿಧ ಕಲಂಗಳಡಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣವೊಂದನ್ನು ರದ್ದುಪಡಿಸುವಂತೆ ಕೋರಲಾಗಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ‘ಈ ಪ್ರಕರಣದಲ್ಲಿ ಪೋಷಕರನ್ನು ಆರೋಪ ಮುಕ್ತಗೊಳಿಸಬೇಕು ಎಂಬ ಮನವಿಯನ್ನು ನಿರಾಕರಿಸಿದ ನ್ಯಾಯಪೀಠ, ‘ಹೆಣ್ಣು ಮಕ್ಕಳಿಗೆ 18 ವರ್ಷ ತುಂಬುವ ಮುನ್ನವೇ ಮದುವೆಯಾಗುವಂತೆ ಏಕೆ ಬಲವಂತ ಮಾಡಬೇಕು? ಪೋಷಕರ ಈ ನಡೆಯನ್ನು ಸಮರ್ಥಿಸಲು ಸಾಧ್ಯವೇ ಇಲ್ಲ. ಇಂತಹ ಪೋಷಕರ ವಿರುದ್ಧ ಕಾನೂನು ಕ್ರಮಗಳನ್ನು ಜರುಗಿಸಲು ಇದು ಸಕಾಲ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿತು.

ಮತ್ತೊಂದು ಪ್ರಕರಣದಲ್ಲಿ ಬಾಲಕಿಯೊಬ್ಬಳು ತನಗೆ 18 ವರ್ಷ ತುಂಬಿಲ್ಲ, ಮದುವೆ ಮಾಡಬೇಡಿ ಎಂದು ಕೇಳಿಕೊಂಡರೂ ಪೋಷಕರು ಮದುವೆ ಮಾಡಿದ್ದಾರೆ. ಇದರಿಂದ ಮಕ್ಕಳು ಪೋಕ್ಸೋ ಪ್ರಕರಣ ಎದುರಿಸುವಂತಾಗಿದೆ. ಇಂತಹ ಅನಿಷ್ಟ ಪ್ರಕರಣಗಳಿಗೆ ಪೋಷಕರೇ ಜವಾಬ್ದಾರಿ. ಎಂದು ನ್ಯಾಯಪೀಠ ಖಾರವಾಗಿ ಪ್ರತಿಕ್ರಿಯಿಸಿತು.


Share It

You cannot copy content of this page