ಬೆಂಗಳೂರು: ಲಾಕಪ್ ಡೆತ್ ಪ್ರಕರಣದಲ್ಲಿ ಅಪರಾಧ ಸಾಬೀತಾದ ನಾಲ್ವರು ಪೊಲೀಸ್ ಕಾನ್ಸ್‌ಟೆಬಲ್‌ಗಳಿಗೆ ಏಳು ವರ್ಷ ಜೈಲು ಹಾಗೂ 50 ಸಾವಿರ ರೂಪಾಯಿ ದಂಡ ವಿಧಿಸಿ ನಗರದ 51ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.
ಹಲಸೂರು ಸಂಚಾರ ಪೊಲೀಸ್ ಠಾಣೆಯ ಮುಖ್ಯಪೇದೆ ಏಜಾಜ್ ಖಾನ್, ರಾಮಮೂರ್ತಿ ನಗರ ಠಾಣೆಯ ಪೇದೆ ಕೇಶವಮೂರ್ತಿ,ಇಂದಿರಾನಗರ ಸಂಚಾರ ಠಾಣೆಯ ಪೇದೆ ಮೋಹನ್ ರಾಮ್, ಇಂದಿರಾನಗರ ಪೊಲೀಸ್ ಠಾಣೆಯ ಸಿದ್ದಪ್ಪ ಬೊಮ್ಮನಹಳ್ಳಿ ಅವರು ಶಿಕ್ಷೆಗೆ ಒಳಗಾದವರು.
ಈ ನಾಲ್ವರು ಅಪರಾಧಿಗಳಿಗೆ ಉದ್ದೇಶಪೂರ್ವಕವಲ್ಲದ ಕೊಲೆ ಅಪರಾಧಕ್ಕೆ 7 ವರ್ಷ ಜೈಲು ಶಿಕ್ಷೆ ಹಾಗೂ ₹30 ಸಾವಿರ ದಂಡ, ತಪ್ಪೊಪ್ಪಿಕೊಳ್ಳಲು ತೊಂದರೆ ನೀಡಿದ ಅಪರಾಧಕ್ಕೆ 5 ವರ್ಷ ಜೈಲು ಹಾಗೂ ₹25 ಸಾವಿರ ದಂಡ ವಿಧಿಸಿ ನ್ಯಾಯಮೂರ್ತಿ ಯಶವಂತ ಕುಮಾರ್ ಆದೇಶ ಮಾಡಿದ್ದಾರೆ. ಇನ್ನೂ ಎಲ್ಲರ ಜೈಲು ಶಿಕ್ಷೆಯ ಅವಧಿಯು ಏಕಕಾಲಕ್ಕೆ ಅನ್ವಯಿಸಲಿದೆ ಎಂದು ನ್ಯಾಯಾಲಯ ಹೇಳಿದೆ.
ಇನ್ನೂ ದಂಡದ ಮೊತ್ತದಲ್ಲಿ ಪ್ರತಿ ಆರೋಪಿಯು ತಲಾ ₹50 ಸಾವಿರ ಹಣವನ್ನು ಮೃತ ಮಹೇಂದ್ರ ರಾಥೋಡ್ ಅವಲಂಬಿತರಿಗೆ ಪಾವತಿಸಬೇಕು. ಸಂತ್ರಸ್ತರ ಪರಿಹಾರ ಯೋಜನೆ-2011ರ ಅಡಿಯಲ್ಲಿ ಬೆಂಗಳೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಪರಿಹಾರ ನಿರ್ಧರಿಸಬೇಕು ಎಂದು ಆದೇಶದಲ್ಲಿ ಸೂಚಿಸಿದೆ.
ಏನಿದು ಪ್ರಕರಣ: ಅಪರಾಧ ಪ್ರಕರಣವೊಂದರ ವಿಚಾರಣೆಗಾಗಿ ಆರೋಪಿ ಮಹೇಂದ್ರ ರಾಥೋಡ್ ಎಂಬಾತನನ್ನು 2016, ಮಾಚ್೯ 19 ರಂದು ಜೀವನ್ ಭೀಮಾನಗರ ಠಾಣೆ ಇನ್ಸ್‌ಪೆಕ್ಟರ್ ಎಂ.ಎಸ್.ಹಿತೇಂದ್ರ ಕರೆದು ತಂದಿದ್ದರು. ಸಂಜೆ 4:15ರ ಸಮಯದಲ್ಲಿ ಅವರು ಕ್ರಿಕೆಟ್ ಸ್ಟೇಡಿಯಂ ಬಂದೋಬಸ್ತ್ ಸಲುವಾಗಿ ಠಾಣೆಯಿಂದ ಹೊರಗೆ ಹೋಗಿದ್ದರು. ಇತ್ತ ಠಾಣೆಯಲ್ಲಿ ಅಪರಾಧ ವಿಭಾಗದ ಪೊಲೀಸರಾದ ಏಜಾಜ್ ಖಾನ್ ಇತರೆ ಮೂವರು ಮಹೇಂದ್ರ ರಾಥೋಡ್ ಎಂಬಾತನ ಮೇಲೆ ಲಾಠಿ ಮತ್ತು ರೋಲರ್ ಬಳಸಿ ಹೊಡೆದು ದೈಹಿಕ ವಾಗಿ ಹಿಂಸಿಸಿದ್ದರು. ದೇಹದ ಸೂಕ್ಷ್ಮ ಭಾಗಗಳಿಗೆ ಬಲವಾದ ಪೆಟ್ಟು ಬಿದ್ದ ಕಾರಣ ಮೆದಳು,ಕಿಡ್ನಿ, ಹೃದಯ ಮತ್ತು ಶ್ವಾಸಕೋಶಕ್ಕೆ ಆಮ್ಲಜನಕ ಪೂರೈಕೆಯಾಗದೆ ಮಹೇಂದ್ರ ರಾಥೋಡ್ ಮೃತಪಟ್ಟಿದ್ದರು.
ಈ ಪ್ರಕರಣ ಸಂಬಂಧ ಪೇದೆಗಳಾದ ಏಜಾಜ್ ಖಾನ್ ಸೇರಿ ನಾಲ್ವರು ಪೊಲೀಸರ ವಿರುದ್ಧ ಅದೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ತನಿಖೆ ಸಿಐಡಿಗೆ ವರ್ಗಾವಣೆಯಾಗಿತ್ತು. ಈ ಪ್ರಕರಣದ ತನಿಖೆ ನಡೆಸಿದ್ದ ಅಂದಿನ ಸಿಐಡಿ ಡಿಎಸ್ಪಿ ಎಸ್.ಟಿ.ಚಂದ್ರಶೇಖರ್ ಅವರು ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು.