ಸುದ್ದಿ

ಸಹಕಾರ ಸಂಘಗಳ ಕಾಯ್ದೆ ತಿದ್ದುಪಡಿ ಸಂವಿಧಾನಬಾಹಿರ: ಹೈಕೋರ್ಟ್

Share It

ಬೆಂಗಳೂರು: ಸಹಕಾರ ಸಂಘಗಳಲ್ಲಿ ನೇಮಕಾತಿ ವೃಂದ ರಚನೆ, ನೇಮಕಾತಿ, ನೌಕರರ ವರ್ಗಾವಣೆ ಹಾಗೂ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಅಧಿಕಾರವನ್ನು ಸಹಕಾರ ಸಂಘಗಳಿಂದ ಮೊಟಕುಗೊಳಿಸಿ ರಾಜ್ಯ ಸರ್ಕಾರ ತಂದಿರುವ ತಿದ್ದುಪಡಿಯು ಸಂವಿಧಾನಬಾಹಿರ ಎಂದು ಹೈಕೋರ್ಟ್ ಆದೇಶಿಸಿದೆ.

ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ಕಾಯ್ದೆ-2023ರ ಸೆಕ್ಷನ್ 128ಎ ತಿದ್ದುಪಡಿ ಪ್ರಶ್ನಿಸಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸಹಕಾರ ಕೃಷಿ ಸಂಸ್ಥೆಯ ಹಾಲಿ ಅಧ್ಯಕ್ಷ ಕೆ.ವಿ. ಪ್ರಸಾದ್ ಹಾಗೂ ಇತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಅನಂತ್ ರಾಮನಾಥ್ ಹೆಗ್ಡೆ ಅವರಿದ್ದ ಪೀಠ ಈ ತೀರ್ಪು ನೀಡಿದೆ.

ಅಲ್ಲದೆ, ಸಹಕಾರ ಸಂಘಗಳ ಕಾಯ್ದೆಯ ಸೆಕ್ಷನ್ 128ಎ ತಿದ್ದುಪಡಿಯು ಸಂವಿಧಾನದ ವಿಧಿ 19 (1)(ಸಿ) ಯ ಉಲ್ಲಂಘನೆಯಾಗಿದೆ. ಹೀಗಾಗಿ, ತಿದ್ದುಪಡಿಯು ಸಂವಿಧಾನಬಾಹಿರವಾಗಿದೆ ಎಂದು ತೀರ್ಪಿನಲ್ಲಿ ವಿವರಿಸಿದೆ. ಸಹಕಾರ ಸಂಘಗಳನ್ನು ರಚಿಸಿ, ಅವುಗಳನ್ನು ನಿರ್ವಹಿಸುವುದು ಸಂವಿಧಾನದ ವಿಧಿ 19(1)(ಸಿ) ಪ್ರಕಾರ ನಾಗರಿಕರ ಮೂಲಭೂತ ಹಕ್ಕು. ಆದರೆ, ಸರ್ಕಾರ ಸಹಕಾರ ಸಂಘಗಳ ಕಾಯ್ದೆಯ ಸೆಕ್ಷನ್ 128ಎ ಗೆ ತಿದ್ದುಪಡಿ ತರುವ ಮೂಲಕ ಸಂವಿಧಾನದತ್ತವಾದ ಮೂಲಭೂತ ಹಕ್ಕನ್ನು ಮೊಟಕುಗೊಳಿಸಿದೆ ಎಂದು ಹೈಕೋರ್ಟ್ ತೀರ್ಪಿನಲ್ಲಿ ಹೇಳಿದೆ.

ಕಾನೂನು ಸುವ್ಯವಸ್ಥೆ, ದೇಶದ ಸಮಗ್ರತೆ ಮತ್ತು ಏಕಾಗ್ರತೆಗೆ ಧಕ್ಕೆ ಬರುವ ಅಪಾಯ ಇದ್ದಾಗ ಮಾತ್ರ ಮೂಲಭೂತ ಹಕ್ಕುಗಳ ಮೇಲೆ ಸೀಮಿತ ನಿರ್ಬಂಧಗಳನ್ನು ಹೇರಬಹುದು. ಆದರೆ, ಈ ಪ್ರಕರಣದಲ್ಲಿ ಅಂತಹ ಸನ್ನಿವೇಶ ಇಲ್ಲ ಎಂದು ಅರ್ಜಿದಾರರರು ವಾದಿಸಿದ್ದಾರೆ. ಸ್ಥಳೀಯರು ತಾವೇ ಸೇರಿಕೊಂಡು ಕಾನೂನು ರೀತಿ ರಚಿಸಿಕೊಂಡು ನಿರ್ವಹಣೆ ಮಾಡುತ್ತ ಬಂದಿರುವ ಸಹಕಾರ ಸಂಘಗಳಲ್ಲಿನ ನೌಕರರ ನೇಮಕಾತಿ, ವರ್ಗಾವಣೆ, ಶಿಸ್ತು ಕ್ರಮ ಮತ್ತಿತರ ಆಡಳಿತಾತ್ಮಕ ವಿಚಾರಗಳನ್ನು ಆಯಾ ಸಹಕಾರ ಸಂಘಗಳ ಆಡಳಿತ ಮಂಡಳಿಗಳು ನೋಡಿಕೊಳ್ಳುತ್ತಿದ್ದವು. ಈಗ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಯ ಸೆಕ್ಷನ್ 128ಎಗೆ ರಾಜ್ಯ ಸರ್ಕಾರ 2023ರಲ್ಲಿ ತಿದ್ದುಪಡಿ ತಂದು, ಆ ಎಲ್ಲಾ ಅಧಿಕಾರಗಳನ್ನು ಸಹಕಾರ ಸಂಘಗಳಿಂದ ಮೊಟಕುಕೊಳಿಸಿದೆ. ಇದು ಸಂವಿಧಾನದ ಮೂಲಭೂತ ಹಕ್ಕಿನ ಉಲ್ಲಂಘನೆ ಆಗಲಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಅಲ್ಲದೇ, ಸರ್ಕಾರ ಸಿಬ್ಬಂದಿ ನೇಮಕ ಮತ್ತು ವರ್ಗಾವಣೆ ಮಾಡುವ ಅಧಿಕಾರ ತೆಗೆದುಕೊಂಡರೆ ಅದು ರಾಜಕೀಯಕ್ಕೆ ಕಾರಣವಾಗುತ್ತದೆ. ಕೊನೆಗೆ ಅದು ಸಹಕಾರ ಸಂಘಗಳ ಕಾರ್ಯನಿರ್ವಹಣೆ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ, ತಿದ್ದುಪಡಿ ರದ್ದುಗೊಳಿಸಬೇಕು, ಸಹಕಾರ ಸಂಘಗಳಿಗೆ ಇರುವ ತನ್ನ ಸಿಬ್ಬಂದಿ ನೇಮಕದ ಮೇಲಿನ ಸ್ವಾತಂತ್ರ್ಯವನ್ನು ಸಂಘಗಳಿಗೆ ಬಿಟ್ಟುಕೊಡಬೇಕು. ಸಹಕಾರ ಸಂಘಗಳ ಕಾಯ್ದೆಯ ಸೆಕ್ಷನ್ 128ಎ ಇದರ ತಿದ್ದುಪಡಿಯನ್ನು ಸಂವಿಧಾನಬಾಹಿರವೆಂದು ಘೋಷಿಸಬೇಕು ಎಂದು ಅರ್ಜಿದಾರರು ಕೋರಿದ್ದರು.
(WRIT PETITION NO. 26102 OF 2023 (CS-RES)

ಮೂಲ Law Time


Share It

You cannot copy content of this page