ಕಾನೂನು

ಎಫ್ಐಆರ್ ಪ್ರತಿ, ಅಪರಾಧದ ಬಗ್ಗೆ ಮಾಹಿತಿ ಒದಗಿಸದಿದ್ದರೆ ಆರೋಪಿಯು ಠಾಣಾಧಿಕಾರಿ ಮುಂದೆ ಹಾಜರಾಗುವ ಅವಶ್ಯಕತೆ ಇಲ್ಲ: ಹೈಕೋರ್ಟ್

Share It

ಬೆಂಗಳೂರು: ಯಾವುದೇ ಆರೋಪ ಸಂಬಂಧ ಆರೋಪಿಯನ್ನು ಪೊಲೀಸ್‌ ಠಾಣೆಗೆ ಕರೆಸಿಕೊಳ್ಳಲು ನೀಡುವ ನೋಟಿಸ್‌ನಲ್ಲಿ ಕ್ರೈಂ ಸಂಖ್ಯೆ, ಎಫ್‌ಐಆರ್‌ ಪ್ರತಿ, ಅಪರಾಧದ ಬಗ್ಗೆ ಮಾಹಿತಿ ಮತ್ತು ದೂರಿನ ಸಂಕ್ಷಿಪ್ತ ರೂಪವನ್ನು ಒಳಗೊಂಡ ಚೆಕ್‌ಲಿಸ್ಟ್‌ ಅನ್ನು ಕಡ್ಡಾಯವಾಗಿ ಒದಗಿಸಬೇಕು ಎಂದು ಕರ್ನಾಟಕ ಹೈಕೋರ್ಟ್‌, ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಅಲ್ಲದೆ, ಈ ಕುರಿತು ಸಾರ್ವಜನಿಕರ ಅವಗಾಹನೆಗಾಗಿ ರಾಜ್ಯ ಗೃಹ ಕಾರ್ಯದರ್ಶಿ ಮತ್ತು ರಾಜ್ಯ ಪೊಲೀಸ್‌ ಮಹಾನಿರ್ದೇಶಕರು ಸೂಕ್ತ ಮಾರ್ಗಸೂಚಿಗಳನ್ನು ಹೊರಡಿಸಬೇಕು ಎಂದು ಆದೇಶಿಸಿದೆ.

ಅಮೃತಹಳ್ಳಿ ಠಾಣೆಯ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ವಾಟ್ಸ್‌ಆಪ್‌ ಮೂಲಕ, ”ನೀವು ಠಾಣೆಗೆ ಹಾಜರಾಗಬೇಕೆಂದು” ಕಳುಹಿಸಿದ್ದ ಸಂದೇಶವನ್ನು ಪ್ರಶ್ನಿಸಿ ಪತ್ರಕರ್ತ ಟಿ.ಆರ್‌. ಶಿವಪ್ರಸಾದ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ನೀಡಿದೆ.

ಚೆಕ್‌ಲಿಸ್ಟ್‌ ನೀಡದಿದ್ದರೆ ಹಾಜರಾಗಬೇಕಿಲ್ಲ: ಭಾರತೀಯ ನ್ಯಾಯ ಸುರಕ್ಷಾ ಸಂಹಿತೆ -2023ರ ಕಲಂ 35ರ ಅನುಸಾರ ಆರೋಪಿಗೆ ಚೆಕ್‌ಲಿಸ್ಟ್‌ ಒದಗಿಸದಿದ್ದರೆ ಅಂತಹ ಆರೋಪಿಯು ಠಾಣಾಧಿಕಾರಿ ಮುಂದೆ ಹಾಜರಾಗುವ ಅವಶ್ಯಕತೆ ಇಲ್ಲ. ಹಾಗೆಯೇ, ಪೊಲೀಸರು ಇಂತಹ ಆರೋಪಿಯ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳುವಂತಿಲ್ಲ ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ: ನನಗೆ ಹಾಗೂ ನನ್ನ ಕುಟುಂಬದ ಸದಸ್ಯರಿಗೆ ಜೀವ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿ ಟಿ.ವಿ. ಚಾನಲ್‌ ಸಿಇಒ ವಿಜಯ್‌ ಟಾಟಾ ನೀಡಿದ ದೂರಿನ ಮೇರೆಗೆ ಅಮೃತಹಳ್ಳಿ ಠಾಣೆ ಪೊಲಿಸರು ಪತ್ರಕರ್ತ ಟಿ.ಆರ್‌. ಶಿವಪ್ರಸಾದ್‌ ಅವರಿಗೆ ವಾಟ್ಸ್‌ಆಪ್‌ ಮೂಲಕ ಸಂದೇಶ ಕಳುಹಿಸಿ, ಠಾಣೆಗೆ ಹಾಜರಾಗಬೇಕೆಂದು ಸೂಚಿಸಿದ್ದರು. ಅದನ್ನು ಪ್ರಶ್ನಿಸಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಅರ್ಜಿದಾರರ ಪರ ಹಿರಿಯ ವಕೀಲ ಎಂ. ಅರುಣ್‌ ಶ್ಯಾಮ್‌ ವಾದ ಮಂಡಿಸಿದ್ದರು.

(ಮೂಲ: LAW TIME)


Share It

You cannot copy content of this page