ದೆಹಲಿ: ಅನಗತ್ಯ ಶಸ್ತ್ರಚಿಕಿತ್ಸೆ ಮಾಡಿದ ಪರಿಣಾಮ ರೋಗಿ ಮತ್ತೊಂದು ಸಂಕಷ್ಟಕ್ಕೆ ತುತ್ತಾದ ಹಿನ್ನೆಲೆಯಲ್ಲಿ ಪೋರ್ಟಿಸ್ ಆಸ್ಪತ್ರೆಗೆ ಎನ್ಸಿಡಿಆರ್ಸಿ 65 ಲಕ್ಷ ದಂಡ ವಿಧಿಸಿದ್ದು, ಈ ಹಣವನ್ನು ರೋಗಿಯ ಕುಟುಂಬಕ್ಕೆ ಪರಿಹಾರದ ರೂಪದಲ್ಲಿ ಪಾವತಿಸುವಂತೆ ಆದೇಶಿಸಿದೆ.
62 ವರ್ಷದ ರೋಗಿಯೊಬ್ಬರಿಗೆ ಪೋರ್ಟಿಸ್ ಆಸ್ಪತ್ರೆ ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆ ನಡೆಸಿತ್ತು. ಆ ನಂತರ ರೋಗಿ ಪಾರ್ಶವಾಯುವಿಗೆ ತುತ್ತಾಗಿದ್ದರು. ಈ ಹಿನ್ನೆಲೆಯಲ್ಲಿ ರೋಗಿಯ ಕುಟುಂಬ ಸದಸ್ಯರು ಅನಗತ್ಯವಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಆರೋಪಿಸಿ ದೂರು ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಎನ್ಸಿಡಿಆರ್ಸಿ ನ್ಯಾ.ರಾಮ್ ಸೂರತ್ ರಾಮ್ ಹಾಗೂ ನ್ಯಾ. ಭರತ್ ಕುಮಾರ್ ಪಾಂಡ್ಯ ಅವರಿದ್ದ ಪೀಠ, ರೋಗಿಯ ಕುಟುಂಬ ಸದಸ್ಯರು ಮಾಡುತ್ತಿರುವ ಆರೋಪದಲ್ಲಿ ಸತ್ಯಾಂಶವಿದೆ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೇ, ರೋಗಿಯ ಕುಟುಂಬಕ್ಕೆ ಪರಿಹಾರ ರೂಪದಲ್ಲಿ 65 ಲಕ್ಷ ರೂಪಾಯಿ ನೀಡುವಂತೆ ದೆಹಲಿಯ ಫೋರ್ಟಿಸ್ ಎಸ್ಕಾರ್ಟ್ಸ್ ಹೃದಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರಕ್ಕೆ ಆದೇಶಿಸಿದೆ.
ಕೋರ್ಟ್ ತನ್ನ ತೀರ್ಪಿನಲ್ಲಿ, ವೈದ್ಯರು ರೋಗಿಯ ಶ್ವಾಸಕೋಶದ ಸ್ಥಿತಿ ಬಗ್ಗೆ ನಿರ್ಲಕ್ಷ್ಯ ಧೋರಣೆ ತಳೆದು ಆಂಜಿಯೋಪ್ಲ್ಯಾಸ್ಟಿಗೆ ಮುಂದಾಗಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ರೋಗಿಗೆ ಆಂಜಿಯೋಪ್ಲಾಸ್ಟಿ ಆಯ್ಕೆಯಾಗಿತ್ತೇ ವಿನಾ ಅನಿವಾರ್ಯವಾಗಿರಲಿಲ್ಲ. ರೋಗಿ ಮತ್ತವರ ಮಗಳು ಖುದ್ದು ವೈದ್ಯರಾಗಿದ್ದು ಸಾಧಕ ಬಾಧಕಗಳನ್ನು ಗಮನಿಸಿಯೇ ಶಸ್ತ್ರಚಿಕಿತ್ಸೆಗೆ ಒಪ್ಪಿಗೆ ನೀಡಿದ್ದರು ಎಂಬುದು ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಕಾರಣವಾಗುವುದಿಲ್ಲ ಎಂದಿದೆ.
ವೈದ್ಯರ ನಿರ್ಲಕ್ಷ್ಯದಿಂದ ಮತ್ತು ಅನಗತ್ಯ ಶಸ್ತ್ರಚಿಕಿತ್ಸೆ ಪರಿಣಾಮ ರೋಗಿ ಶಾಶ್ವತ ಮೆದುಳಿನ ಹಾನಿಗೆ ತುತ್ತಾಗಿ ಕೆಲ ಕಾಲ ಕೋಮಾ ಸ್ಥಿತಿಯಲ್ಲಿದ್ದರು. ಕೋಮಾದಿಂದ ಹೊರಬಂದ ಬಳಿಕ ದೇಹದ ಎಡಭಾಗ ಸಂಪೂರ್ಣ ಪಾರ್ಶವಾಯುವಿಗೆ ತುತ್ತಾಯಿತು. ರೋಗಿಯು ಬೇರೆಯವರೊಂದಿಗೆ ಮಾತನಾಡುವ, ಆಲಿಸುವ ಸಾಮರ್ಥ್ಯ ಕಳೆದುಕೊಂಡರು ಎಂದು ಆರೋಪಿಸಿ ರೋಗಿಯ ಪತ್ನಿ 2012ರಲ್ಲಿ ದೂರು ನೀಡಿದ್ದರು.
ರೋಗಿಯು ಅನಾರೋಗ್ಯಕ್ಕೆ ಮುನ್ನ ಗಳಿಸುತ್ತಿದ್ದ ಆದಾಯ, ವೈದ್ಯಕೀಯ ವೆಚ್ಚ, ರೋಗಿಯ ಕುಟುಂಬಕ್ಕೆ ಉಂಟಾದ ನಷ್ಟ, ಮಾನಸಿಕ ಯಾತನೆಗಳನ್ನು ಪರಿಗಣಿಸಿದ ನ್ಯಾಷನಲ್ ಕನ್ಸ್ಯೂಮರ್ ಡಿಸ್ಪ್ಯೂಟ್ ರಿಡ್ರೆಸಲ್ ಕಮಿಷನ್ ರೋಗಿಯ ಕುಟುಂಬಕ್ಕೆ 65 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿದೆ.
C.C.No.326/2012