ಕಳೆದ 18 ವರ್ಷಗಳ ಹಿಂದೆ ನಾಪತ್ತೆಯಾಗಿರುವ ಹೆಂಡತಿ ಮಕ್ಕಳನ್ನು ಹುಡುಕಿಕೊಡುವಂತೆ ಕೋರಿ ವ್ಯಕ್ತಿಯೋರ್ವ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ಮಧ್ಯಪ್ರದೇಶ ಹೈಕೋರ್ಟ್, ಆತನಿಗೆ 10 ಸಾವಿರ ರೂಪಾಯಿ ದಂಡ ವಿಧಿಸಿದೆ.
ತನ್ನ ಹೆಂಡತಿ ಮಕ್ಕಳು 2006 ರಿಂದ ನಾಪತ್ತೆಯಾಗಿದ್ದು, ಆವರನ್ನು ಹುಡುಕಿಕೊಡಲು ಪೊಲೀಸರಿಗೆ ನಿರ್ದೇಶಿಸಬೇಕು ಎಂದು ಕೋರಿ ನಂದಕಿಶೋರ್ ಎಂಬಾತ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದ.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಶಾಲ್ ಧಗತ್ ಅವರಿದ್ದ ಪೀಠ, ಅರ್ಜಿದಾರರು ಕಾನೂನನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟು 10 ಸಾವಿರ ರೂಪಾಯಿ ದಂಡ ವಿಧಿಸಿ, ಮನವಿ ವಜಾಗೊಳಿಸಿದೆ. ಹಾಗೆಯೇ ದಂಡದ ಮೊತ್ತವನ್ನು 30 ದಿನಗಳಲ್ಲಿ ಮಧ್ಯಪ್ರದೇಶ ಹೈಕೋರ್ಟ್ ನೌಕರರ ಸಂಘಕ್ಕೆ ಠೇವಣಿ ಮಾಡುವಂತೆ ಆದೇಶಿಸಿದೆ.
ಹೈಕೋರ್ಟ್ ತನ್ನ ತೀರ್ಪಿನಲ್ಲಿ, ಪತಿಯ ಅಸಹನೀಯ ಕಿರುಕುಳ ತಡೆಯಲಾರದೆ ಪತ್ನಿ ತನ್ನಿಬ್ಬರು ಮಕ್ಕಳೊಂದಿಗೆ ಮನೆ ಬಿಟ್ಟು ಹೋಗಿದ್ದಾರೆ. ಈ ವಿಚಾರ ಅರ್ಜಿದಾರರಿಗೆ ಸಂಪೂರ್ಣವಾಗಿ ತಿಳಿದಿದೆ. ಹಾಗಿದ್ದೂ, ಅರ್ಜಿದಾರ ತನ್ನ ಹೆಂಡತಿ ಮಕ್ಕಳನ್ನು ಹುಡುಕಿಕೊಡಲು ಪೊಲೀಸರಿಗೆ ನಿರ್ದೇಶಿಸಿ ಎಂದು ಹೈಕೋರ್ಟ್ ಮೆಟ್ಟಿಲೇರಿರುವುದು ಕಾನೂನಿನ ದುರ್ಬಳಕೆಯಲ್ಲದೆ ಮತ್ತೇನೂ ಅಲ್ಲ ಎಂದು ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರ ನಂದಕಿಶೋರ್ 2006ರ ಏಪ್ರಿಲ್ 18ರಿಂದ ತನ್ನ ಹೆಂಡತಿ ಮಕ್ಕಳು ಕಾಣೆಯಾಗಿದ್ದಾರೆ. ಅವರನ್ನು ಹುಡುಕಿಕೊಡಲು ಪೊಲೀಸರಿಗೆ ನಿರ್ದೇಶಿಸಿ ಎಂದು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಅರ್ಜಿದಾರನ ಹೆಂಡತಿ ಮಕ್ಕಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಪೊಲೀಸರಿಗೆ ನಿರ್ದೇಶಿಸಿತ್ತು.
ಹೈಕೋರ್ಟ್ ಸೂಚನೆಯಂತೆ ಪೊಲೀಸರು ಅರ್ಜಿದಾರನ ಪತ್ನಿ-ಮಕ್ಕಳನ್ನು ಪತ್ತೆ ಹಚ್ಚಿ ನ್ಯಾಯಲಯಕ್ಕೆ ಕರೆತಂದು ಹಾಜರುಪಡಿಸದ್ದರು.
ಹೈಕೋರ್ಟ್ ಗೆ ಹಾಜರಾದ ಪತ್ನಿ ಮನೆ ಬಿಟ್ಟು ಹೋಗಲು ಕಾರಣವಾದ ವಿಚಾರಗಳನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದರು. ತನ್ನ ಪತಿ ಅಮಾನವೀಯವಾಗಿ ವರ್ತಿಸುತ್ತಿದ್ದರು. ತನಗೆ ಮತ್ತು ತನ್ನ ಮಕ್ಕಳಿಗೆ ನಿಷ್ಕರುಣೆಯಿಂದ ಥಳಿಸುತ್ತಿದ್ದರು. ಜೀವ ಭಯದಿಂದಾಗಿ 2006 ರಲ್ಲಿ ಪತಿ ಮನೆಯನ್ನು ತೊರೆದು ಹೋಗಿದ್ದೇನೆ ಮತ್ತು ಕಳೆದ 18 ವರ್ಷಗಳಿಂದಲೂ ಪ್ರತ್ಯೇಕವಾಗಿ ವಾಸಿಸುತ್ತಿದ್ದೇನೆ ಎಂದು ತಿಳಿಸಿದ್ದರು.
WP No.17892/2024
ಮೂಲ-Law Time