ವಿಜಯಪುರ: ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವಕೀಲ ರವಿ ಮೇಲಿನಮನಿ ಎಂಬುವವರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆಸಿ ಕೊಲೈಗೈದು, ಬಳಿಕ ಎರಡು ಕಿ.ಮೀ. ದೂರ ಶವವನ್ನು ಎಳೆದೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ವಿಜಯಪುರ ಜಿಲ್ಲಾ ಪೊಲೀಸ್ ಅರೆಸ್ಟ್ ಮಾಡಿದ್ದಾರೆ.
ತುಳಸಿರಾಮ ಹರಿಜನ ಸೇರಿದಂತೆ ಅಲೆಕ್ಸ್ ಗೊಲ್ಲರ, ಷಣ್ಮುಖ ನಡುವಿನಕೇರಿ, ಪ್ರಕಾಶ ಗೊಲ್ಲರ, ಮುರುಗೇಶ ಉಳ್ಳಾಗಡ್ಡಿ ಬಂಧಿತ ಆರೋಪಿಗಳು.
ಹಳೇ ವೈಷಮ್ಯದ ಕಾರಣಕ್ಕೆ ಕೊಲೆ ನಡೆದಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ. ಕೊಲೆಯಾದ ವಕೀಲ ರವಿ ಮೇಲಿನಮನಿ ಮತ್ತು ಆರೋಪಿ ತುಳಸಿರಾಮ ಹರಿಜನ ನಡುವೆ ನಾಲೈದು ತಿಂಗಳ ಹಿಂದೆ ಹೊಡೆದಾಟ ನಡೆದಿತ್ತು. ಈ ಸಂದರ್ಭದಲ್ಲಿ ವಕೀಲ ರವಿ ಮೇಲಿನಮನಿ ತುಳಸಿರಾಮಗೆ ಕೊಲೆ ಬೆದರಿಕೆ ಹಾಕಿದ್ದನು. ಬಂಧಿತ ಇನ್ನೊಬ್ಬ ಆರೋಪಿ ಅಲೆಕ್ಸ್ ಗೊಲ್ಲರನ್ನು ವಕೀಲ ಮೇಲಿನಮನಿ ಕಿಡ್ನಾಪ್ ಮಾಡಿ, ಹೊಡೆದು, ಕೊಲೆ ಬೆದರಿಕೆ ಹಾಕಿದ್ದನು. ಈ ಸಿಟ್ಟಿಗೆ ಎಲ್ಲರೂ ಸೇರಿಕೊಂಡು ವಕೀಲನನ್ನು ಕೊಲೆ ಮಾಡಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಬಾಯ್ದಿಟಿದ್ದಾರೆ.
ಕೋರ್ಟ್ ಕಲಾಪ ಮುಗಿಸಿ ವಕೀಲ ದ್ವಿಚಕ್ರ ವಾಹನದಲ್ಲಿ ತೆರಳುತ್ತಿರುವಾಗ ಕೊಲೆ ಮಾಡಲು ಹೊಂಚು ಹಾಕಿ ಕಾಯುತ್ತಿದ್ದ ಆರೋಪಿಗಳು ನಂಬರ್ ಪ್ಲೇಟ್ ಇಲ್ಲದ ಕಾರಿನ ಮೂಲಕ ಹಿಂದಿನಿಂದ ಡಿಕ್ಕಿ ಹೊಡೆಸಿದ್ದಾರೆ. ಬಳಿಕ ಕಾರನ್ನು ನಿಲ್ಲಿಸದೇ ಶವವನ್ನು ಸುಮಾರು ಎರಡು ಕಿ.ಮೀ.ದೂರು ಎಳೆದೊಯ್ದಿದ್ದರು. ಶವ ಕಾರಿನಿಂದ ಬೇರ್ಪಟ್ಟ ಬಳಿಕ ಕಾರಿನೊಂದಿಗೆ ಪರಾರಿಯಾಗಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದರು.