ಬೆಂಗಳೂರು: ಖಾಸಗಿ ವ್ಯಕ್ತಿಯ ಹೆಸರಿನಲ್ಲಿದ್ದ ಕಂದಾಯ ದಾಖಲೆಗಳಲ್ಲಿ ಹೆಸರು ಬದಲಾಯಿಸಿದಾಕ್ಷಣ ಆಸ್ತಿಯ ಮಾಲಿಕತ್ವ ಬದಲಾಗದು ಎಂದು ಹೈಕೋರ್ಟ್ ನ ಕಲಬುರಗಿ ಪೀಠ ಮಹತ್ವದ ತೀರ್ಪು ನೀಡಿದೆ.
ಇದೇ ವೇಳೆ, ಚೆನ್ನಮ್ಮ ಹಿರೇಮಠ ಎಂಬುವರ ಹೆಸರಿನಲ್ಲಿದ್ದ ಆಸ್ತಿಯ ದಾಖಲೆಗಳಲ್ಲಿ ಅವರ ಹೆಸರು ತೆಗೆದು ವಕ್ಫ್ ಬೋರ್ಡ್ ಹೆಸರು ಸೇರ್ಪಡೆ ಮಾಡಿದ್ದ ಕಂದಾಯ ಇಲಾಖೆ ಅಧಿಕಾರಿಗಳಿಗೆ ದಾಖಲೆಗಳನ್ನು ಸರಿಪಡಿಸಿಕೊಡುವಂತೆ ನಿರ್ದೇಶಿಸಿದೆ.
ರಾಯಚೂರಿನ ರೈತ ಮಹಿಳೆ ಚೆನ್ನಮ್ಮ ಹಿರೇಮಠ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅರ್ಜಿದಾರರ ಹೆಸರಿಗೆ 60 ದಿನಗಳಲ್ಲಿ ದಾಖಲೆಗಳನ್ನು ಸರಿಪಡಿಸಿಕೊಡುವಂತೆ ಅಧಿಕಾರಿಗಳಿಗೆ ಹೈಕೋರ್ಟ್ ನಿರ್ದೇಶಿಸಿದೆ.
ಹೈಕೋರ್ಟ್ ತನ್ನ ತೀರ್ಪಿನಲ್ಲಿ, ಪ್ರಾದೇಶಿಕ ಆಯುಕ್ತರು ಹೊರಡಿಸಿರುವ ಆದೇಶಗಳನ್ನು ತಹಶೀಲ್ದಾರ್ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಒಂದು ಆಸ್ತಿ ವಕ್ಫ್ ಮಂಡಳಿಗೆ ಸೇರಿದ್ದರೆ ಅಂತಹ ಸಂದರ್ಭದಲ್ಲಿ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲನೆ ನಡೆಸಿ, ನಂತರ ದಾಖಲೆಗಳಲ್ಲಿ ಹೆಸರು ಸೇರ್ಪಡೆ ಮಾಡಬೇಕು. ಆದರೆ, ಈ ಪ್ರಕರಣದಲ್ಲಿ ಯಾವುದೇ ಪರಿಶೀಲನೆ ನಡೆಸದೆ, ಏಕಾಏಕಿ ಹೆಸರು ಬದಲಾವಣೆ ಮಾಡಲಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಅಲ್ಲದೇ, ಈ ಹಿಂದೆ ಹೈಕೋರ್ಟ್ ಅರ್ಜಿದಾರರ ಮನವಿ ಪರಿಗಣಿಸಲು ಅಧಿಕಾರಿಗಳಿಗೆ ನಿರ್ದೇಶಿಸಿದ್ದರೂ ಸೂಕ್ತ ಕ್ರಮ ಕೈಗೊಂಡಿಲ್ಲ. ಉಪವಿಭಾಗಾಧಿಕಾರಿ ಈ ವಿಚಾರದಲ್ಲಿ ತಮಗೆ ಯಾವುದೇ ಅಧಿಕಾರವಿಲ್ಲ, ಆಸ್ತಿಗೆ ಸಂಬಂಧಿಸಿದಂತೆ ವ್ಯಾಜ್ಯವಿದ್ದರೆ ವಕ್ಫ್ ಕಾಯ್ದೆಯ ಸೆಕ್ಷನ್ 83ರ ಅಡಿ ವಕ್ಫ್ ನ್ಯಾಯಮಂಡಳಿ ಮೊರೆ ಹೋಗಿ ಎಂದು ಹೇಳಿದ್ದಾರೆ. ಆದರೆ, ದಾಖಲೆಗಳ ಪ್ರಕಾರ ಅರ್ಜಿದಾರರು ಆಸ್ತಿಯ ಮಾಲಿಕರಾಗಿದ್ದಾರೆ. ಆಸ್ತಿ ವಕ್ಫ್ ಬೋರ್ಡ್‌ಗೆ ಸೇರಿದ್ದು ಎಂದು ಹೇಳಲು ದಾಖಲೆಗಳಿಲ್ಲ. ಹೀಗಾಗಿ ಅವರು ತಮ್ಮ ಆಸ್ತಿಗಾಗಿ ವಕ್ಫ್ ಟ್ರಿಬ್ಯುನಲ್ ಮೊರೆ ಹೋಗಬೇಕಾಗಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಅಂತಿಮವಾಗಿ ಆಸ್ತಿಯ ಹಕ್ಕುಸ್ವಾಮ್ಯದ ಕುರಿತಂತೆ ವಿವಾದಗಳಿದ್ದಲ್ಲಿ ಅವುಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲು ತಹಶೀಲ್ದಾರ್ ಗೆ ಸ್ವಾತಂತ್ರವಿದೆ ಎಂದಿರುವ ಹೈಕೋರ್ಟ್, ಅಂತಹ ಕ್ರಮ ಕೈಗೊಳ್ಳುವುದಿದ್ದಲ್ಲಿ, ಅರ್ಜಿದಾರರಿಗೆ ನೋಟಿಸ್ ನೀಡಿ, ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿ ನಂತರ ಸೂಕ್ತ ನಿರ್ಣಯ ಕೈಗೊಳ್ಳಬೇಕು ಎಂದು ಹೈಕೋರ್ಟ್ ಕಂದಾಯ ಅಧಿಕಾರಿಗಳಿಗೆ ನಿರ್ದೇಶಿಸಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರರಾದ ಚೆನ್ನಮ್ಮ ಹಿರೇಮಠ ಅವರು 2012ರಲ್ಲಿ ಕ್ರಯಪತ್ರದ ಮೂಲಕ 39 ಗುಂಟೆ ಜಮೀನು ಖರೀದಿಸಿದ್ದರು. ಈ ಜಮೀನು ಪೂರ್ವದಲ್ಲಿ ಹಸನ್ ಖಾನ್ ಹಾಗೂ ಹಕೀಮ್ ಖಾನ್ ಎಂಬುವರಿಗೆ ಮಂಜೂರಾದ ಇನಾಂ ಜಮೀನಾಗಿತ್ತು. ಆ ನಂತರದಲ್ಲಿ ಒಬ್ಬರಿಂದೊಬ್ಬರಿಗೆ ಮಾರಾಟವಾಗಿ, ಕೊನೆಯದಾಗಿ ಚೆನ್ನಮ್ಮ 2012 ರಲ್ಲಿ ಶಿವಾನಂದ್ ಎಂಬುವರಿಂದ ಜಮೀನು ಖರೀದಿಸಿದ್ದರು.
2017ರಲ್ಲಿ ವಕ್ಪ್ ಬೋರ್ಡ್ ಗೆ ಸಂಬಂಧಿಸಿದ ಆಸ್ತಿಗಳ ಬಗ್ಗೆ ಪರಿಶೀಲನೆ ನಡೆಸಿ, ಒಂದು ವೇಳೆ ಕಂದಾಯ ದಾಖಲೆಗಳಲ್ಲಿ ಹೆಸರು ಬದಲಾವಣೆ ಆಗಿದ್ದರೆ ಅವುಗಳನ್ನು ತೆಗೆದು, ಕಂದಾಯ ದಾಖಲೆಗಳ ಕಾಲಂ ನಂ 9 ಮತ್ತು 11 ರಲ್ಲಿ ವಕ್ಫ್ ಬೋರ್ಡ್ ಹೆಸರು ದಾಖಲಿಸಲು ಕ್ರಮ ಕೈಗೊಳ್ಳುವಂತೆ ಪ್ರಾದೇಶಿಕ ಆಯುಕ್ತರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆ ಜಿಲ್ಲಾಧಿಕಾರಿ ಸಂಬಂಧಪಟ್ಟ ದಾಖಲೆಗಳಲ್ಲಿ ವಕ್ಫ್ ಹೆಸರನ್ನು ನಮೂದಿಸುವಂತೆ ತಹಶೀಲ್ದಾರ್ ಗಳಿಗೆ ಆದೇಶಿಸಿದ್ದರು. ತಹಶೀಲ್ದಾರ್ 2018-19ರಲ್ಲಿ ಚೆನ್ನಮ್ಮ ಅವರಿಗೆ ಸೇರಿದ ಆಸ್ತಿಯ ಕಂದಾಯ ದಾಖಲೆಗಳಲ್ಲಿ ವಕ್ಫ್ ಮಂಡಳಿಯ ಹೆಸರು ಸೇರಿಸಿದ್ದರು.
ಈ ವಿಚಾರ ತಿಳಿದ ನಂತರ ಅರ್ಜಿದಾರೆ ಚೆನ್ನಮ್ಮ, ದಾಖಲೆಗಳಲ್ಲಿ ತಮ್ಮ ಹೆಸರು ನಮೂದಿಸುವಂತೆ ಮನವಿ ಸಲ್ಲಿಸಿದ್ದರು. ಆದರೆ, ಅದನ್ನು ಅಧಿಕಾರಿಗಳು ಪುರಸ್ಕರಿಸದೇ ಇದ್ದಾಗ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ ಅವರ ಮನವಿ ಪರಿಗಣಿಸುವಂತೆ ಸೂಚಿಸಿತ್ತು. ಆದರೆ, ಉಪವಿಭಾಗಾಧಿಕಾರಿಯು ಅರ್ಜಿದಾರರ ಮನವಿ ತಿರಸ್ಕರಿಸಿ, ವಕ್ಫ್ ಕಾಯ್ದೆ ಸೆಕ್ಷನ್ 83ರ ಪ್ರಕಾರ ವಕ್ಫ್ ಟ್ರಿಬ್ಯುನಲ್‌ಗೆ ಅರ್ಜಿ ಸಲ್ಲಿಸುವಂತೆ ಸೂಚಿಸಿದ್ದರು. ಎಸಿ ಆದೇಶ ಪ್ರಶ್ನಿಸಿ ಅರ್ಜಿದಾರರು ಮತ್ತೆ ಹೈಕೋರ್ಟ್ ಮೊರೆ ಹೋಗಿದ್ದರು.