ಸುದ್ದಿ

ಅಬಕಾರಿ ನೀತಿ ಹಗರಣ: ನ್ಯಾಯಾಂಗ ಬಂಧನದಲ್ಲಿದ್ದ ಬಿಆರ್‌ಎಸ್‌ ನಾಯಕಿ ಕೆ.ಕವಿತಾ ಗೆ ಷರತ್ತುಬದ್ಧ ಜಾಮೀನು

Share It

ದೆಹಲಿ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದ ಬಿಆರ್‌ಎಸ್‌ ನಾಯಕಿ ಕೆ.ಕವಿತಾ ಅವರಿಗೆ ಸುಪ್ರೀಂ ಕೋರ್ಟ್ ಇಂದು ಷರತ್ತುಬದ್ಧ ಜಾಮೀನು ನೀಡಿದೆ.

ಪ್ರಕರಣದಲ್ಲಿ ಜಾಮೀನು ಕೋರಿ ಕವಿತಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಬಿ.ಆರ್ ಗವಾಯಿ ಹಾಗೂ ನ್ಯಾ. ಕೆ.ವಿ. ವಿಶ್ವನಾಥ್ ಅವರಿದ್ದ ಪೀಠ ಅಬಕಾರಿ ನೀತಿ ಹಗರಣದಲ್ಲಿ ಷರತ್ತುಬದ್ಧ ಜಾಮೀನು ನೀಡಿ ಆದೇಶಿಸಿದೆ. ಸುಮಾರು 5 ತಿಂಗಳ ಹಿಂದೆ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಕವಿತಾರಿಗೆ ಇದೀಗ ರಿಲೀಫ್ ಸಿಕ್ಕಂತಾಗಿದೆ.

ಪ್ರಕರಣದಲ್ಲಿ ಜಾಮೀನು ನೀಡದ ದೆಹಲಿ ಹೈಕೋರ್ಟ್ ನ ತೀರ್ಪು ಪ್ರಶ್ನಿಸಿ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕಲ್ವಕುಂಟ್ಲ ಕವಿತಾ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಪ್ರಕರಣದ ತನಿಖೆ ಪೂರ್ಣಗೊಂಡಿದೆ ಮತ್ತು ವಿಚಾರಣೆ ಪೂರ್ಣಗೊಳ್ಳಲು ಬಹಳ ಸಮಯ ತೆಗೆದುಕೊಳ್ಳಲಿದೆ. ಇನ್ನು ಆರೋಪಿ ಮಹಿಳೆಯಾಗಿದ್ದು ಕಳೆದ 5 ತಿಂಗಳಿಂದ ಜೈಲಿನಲ್ಲಿದ್ದಾರೆ. ವಿಚಾರಣಾ ಅವಧಿಯಲ್ಲಿ ಅವರನ್ನು ನ್ಯಾಯಾಂಗ ಬಂಧನದಲ್ಲಿಡುವ ಮೂಲಕ ಶಿಕ್ಷೆಯಾಗಬಾರದು ಎಂದು ಅಭಿಪ್ರಾಯಪಟ್ಟು ಜಾಮೀನು ನೀಡಿದೆ.

ಹಿನ್ನೆಲೆ- ಕವಿತಾ ಅವರನ್ನು ಮಾರ್ಚ್ 15 ರಂದು ಹೈದರಾಬಾದ್‌ನಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿತ್ತು. ನಂತರ ಸಿಬಿಐ ಅವರನ್ನು ಏಪ್ರಿಲ್ 11 ರಂದು ಕಸ್ಟಡಿಗೆ ತೆಗೆದುಕೊಂಡಿತ್ತು. ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕವಿಲಾ ಲಂಚ ವಿನಿಮಯದಲ್ಲಿ ಮತ್ತು ಮನಿ ಲಾಂಡರಿಂಗ್‌ ನಲ್ಲಿ ಭಾಗಿಯಾಗಿದ್ದಾರೆ ಎಂದು ಸಿಬಿಐ ಮತ್ತು ಇಡಿ ಆರೋಪಿಸಿವೆ.


Share It

You cannot copy content of this page