ಸುದ್ದಿ

ಮಾನನಷ್ಟ ಮೊಕದ್ದಮೆ: ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧದ ಕೇಸ್ ರದ್ದು

Share It

ಬೆಂಗಳೂರು: ಸಚಿವ ಶಿವಾನಂದ ಎಸ್. ಪಾಟೀಲ್ ದಾಖಲಿಸಿದ್ದ ಮಾನನಷ್ಟ ಪ್ರಕರಣ ಸಂಬಂಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧ ನಗರದ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) ಸೆಕ್ಷನ್ 223 ಅಡಿಯಲ್ಲಿ ಜಾರಿಗೊಳಿಸಿದ್ದ ನೋಟಿಸ್‌ನ್ನು ಹೈಕೋರ್ಟ್ ರದ್ದುಪಡಿಸಿದೆ. ಅಲ್ಲದೆ, ಹೊಸದಾಗಿ ವಿಚಾರಣೆ ನಡೆಸಲು ವಿಶೇಷ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.

ಶಿವಾನಂದ ಪಾಟೀಲ್ ಅವರ ಖಾಸಗಿ ದೂರು ಪರಿಗಣಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾರಿಗೊಳಿಸಿದ್ದ ನೋಟಿಸ್ ರದ್ದುಪಡಿಸುವಂತೆ ಕೋರಿ ಯತ್ನಾಳ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಈ ಆದೇಶ ನೀಡಿದೆ.

ಪ್ರಕರಣದಲ್ಲಿ ಯತ್ನಾಳ್ ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 156ರ ಅಡಿಯಲ್ಲಿ ವಿಶೇಷ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿತ್ತು. ಅದನ್ನು ವಿಚಾರಣೆಗೆ ಅಂಗೀಕರಿಸಿದ್ದ ವಿಶೇಷ ನ್ಯಾಯಾಲಯ, ಬಿಎನ್‌ಎಸ್‌ಎಸ್ ಸೆಕ್ಷನ್ 223 ಅಡಿಯಲ್ಲಿ ಯತ್ನಾಳ್ ಅವರಿಗೆ ನೇರವಾಗಿ ನೋಟಿಸ್ ಜಾರಿ ಮಾಡಿತ್ತು.

ಅದನ್ನು ಆಕ್ಷೇಪಿಸಿರುವ ಹೈಕೋರ್ಟ್, ಬಿಎನ್‌ಎಸ್‌ಎಸ್ ಸೆಕ್ಷನ್ 223ರ ಪ್ರಕಾರ ಖಾಸಗಿ ದೂರನ್ನು ದಾಖಲಿಸಿಕೊಳ್ಳುವ ಮೊದಲಿಗೆ ಮ್ಯಾಜಿಸ್ಟ್ರೇಟ್, ಆರೋಪಿಗೆ ದೂರಿನ ಪ್ರತಿ, ಎಫ್‌ಐಆರ್, ದೂರುದಾರರ ಮತ್ತು ಸಾಕ್ಷಿಯ ಸ್ವಯಂ ಹೇಳಿಕೆ ಹಾಗೂ ಪೂರಕ ದಾಖಲೆಗಳನ್ನು ಒದಗಿಸಬೇಕು. ಬಳಿಕ ಅವರ ಅವಹಾಲು ಆಲಿಸಬೇಕು. ಆ ನಂತರವೇ ನೋಟಿಸ್ ಜಾರಿ ಮಾಡುವ ಪ್ರಕ್ರಿಯೆಗೆ ಮುಂದಾಗಬೇಕು. ಅದು ಬಿಟ್ಟು ನೇರವಾಗಿ ಕಾಗ್ನಿಜೆನ್ಸ್ (ಪ್ರಕರಣವನ್ನು ವಿಚಾರಣೆಗೆ ಪರಿಗಣಿಸುವ ಪ್ರಕ್ರಿಯೆ) ತೆಗೆದುಕೊಂಡು ನೇರವಾಗಿ ನೋಟಿಸ್ ಜಾರಿ ಮಾಡಲು ಅವಕಾಶವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.

ಯತ್ನಾಳ್ ಅವರಿಗೆ ನೋಟಿಸ್ ಜಾರಿ ಮಾಡಿರುವ ಪ್ರಕ್ರಿಯೆಯಲ್ಲಿ ಕಾನೂನು ಲೋಪ ಕಂಡುಬಂದಿದೆ. ಆದ್ದರಿಂದ ಯತ್ನಾಳ್ ಅವರ ವಿರುದ್ಧದ ನೋಟಿಸ್ ರದ್ದುಪಡಿಸಲಾಗುತ್ತಿದೆ ಎಂದು ತಿಳಿಸಿದ ನ್ಯಾಯಪೀಠ, ಪ್ರಕರಣವನ್ನು ವಿಚಾರಣಾ ನ್ಯಾಯಾಲಯಕ್ಕೆ ಹಿಂದಿರುಗಿಸಿದೆ. ಮುಂದಿನ ನಾಲ್ಕು ವಾರದಲ್ಲಿ ಹೈಕೋರ್ಟ್ ಆದೇಶದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ಗಮನದಲ್ಲಿ ಇರಿಸಿಕೊಂಡು ಪ್ರಕರಣವನ್ನು ಹೊಸದಾಗಿ ವಿಚಾರಣೆ ನಡೆಸಬೇಕು ಎಂದು ವಿಶೇಷ ನ್ಯಾಯಾಲಯಕ್ಕೆ ಆದೇಶಿಸಿದೆ.

ಈ ವೇಳೆ ನ್ಯಾಯಪೀಠ, ಬಿಎನ್‌ಎಸ್‌ಸ್ ಅಡಿಯಲ್ಲಿ ಪ್ರಕಟಗೊಂಡ ಮೊದಲ ತೀರ್ಪು ಇದಾಗಿದೆ. ದೇಶದಲ್ಲಿ ಈವರೆಗೂ ಬಿಎನ್‌ಸ್‌ಎಸ್ ಅಡಿಯಲ್ಲಿ ಯಾವ ನ್ಯಾಯಾಲಯವೂ ತೀರ್ಪು ಬರೆದಿಲ್ಲ. ಈ ತೀರ್ಪಿನಿಂದ ಖಾಸಗಿ ದೂರು ದಾಖಲಾದ ಸಂದರ್ಭದಲ್ಲಿ ಅಧೀನ ನ್ಯಾಯಾಲಯಗಳು ಬಿಎನ್‌ಎಸ್‌ಎಸ್ ಅಡಿಯಲ್ಲಿ ಯಾವ ಪ್ರಕ್ರಿಯೆ ಅನುಸರಿಸಬೇಕು ಎಂಬ ಬಗ್ಗೆ ಸ್ಪಷ್ಟತೆ ಸಿಗುತ್ತದೆ ತಿಳಿಸಿತು.

ಪ್ರಕರಣದ ಹಿನ್ನೆಲೆ: ಕಳೆದ ಲೋಕಸಭಾ ಚುನಾವಣೆಯಲ್ಲಿ ಬಾಗಲಕೋಟೆ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಮಾಡುವ ಸಂದರ್ಭದಲ್ಲಿ ಯತ್ನಾಳ್ ಅವರು ನನ್ನ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಸಚಿವ ಶಿವಾನಂದ ಎಸ್.ಪಾಟೀಲ್ ಅವರು ಖಾಸಗಿ ದೂರು ದಾಖಲಿಸಿದ್ದರು. ಅದನ್ನು ವಿಚಾರಣೆ ನಡೆಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ದೂರನ್ನು ವಿಚಾರಣೆಗೆ ಅಂಗೀಕರಿಸಿ ಬಿಎನ್‌ಎಸ್‌ಎಸ್ ಸೆಕ್ಷನ್ 223ರ ಅಡಿಯಲ್ಲಿ ನೋಟಿಸ್ ಜಾರಿ ಮಾಡಿತ್ತು. ಅದನ್ನು ಪ್ರಶ್ನಿಸಿ ಯತ್ನಾಳ್ ಹೈಕೋರ್ಟ್ ಮೆಟ್ಟಿಲೇರಿದ್ದರು.


Share It

You cannot copy content of this page