ಸುದ್ದಿ

‘ಭಾರತ್ ಮಾತಾ ಕಿ ಜೈ’ ಘೋಷಣೆ ಕೂಗಿದ್ದವರ ವಿರುದ್ಧ ಕ್ರಿಮಿನಲ್ ಕೇಸ್: ಪ್ರಕರಣ ರದ್ದುಪಡಿಸಿದ ಹೈಕೋರ್ಟ್

Share It

‘ಭಾರತ್ ಮಾತಾ ಕಿ ಜೈ’ ಘೋಷಣೆಯು ಸಾಮರಸ್ಯವನ್ನು ಉತ್ತೇಜಿಸುತ್ತದೆಯೇ ಹೊರತು ವೈಷಮ್ಯ ಹರಡುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಮಸೀದಿ ಮುಂದೆ ‘ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗಿದ್ದ ವ್ಯಕ್ತಿಗಳ ವಿರುದ್ಧ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಿ ತೀರ್ಪು ನೀಡಿದೆ.

ಮಸೀದಿ ಮುಂದೆ ಪ್ರತಿಭಟನೆ ನಡೆಸಿ “ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗಿದ ಸಂಬಂಧ ಎರಡು ಧರ್ಮಗಳ ವಿರುದ್ಧ ದ್ವೇಷ ಹರಡುವ ಆರೋಪದ ಮೇಲೆ ಮಂಗಳೂರಿನ ಸುರೇಶ್ ಸೇರಿ ಐವರು ಹಿಂದು ಕಾರ್ಯಕರ್ತರ ವಿರುದ್ಧ ದಾಖಲಿಸಿದ್ದ ಪ್ರಕರಣ ರದ್ದುಪಡಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

2024 ಜೂ.9ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧಿಕಾರ ಸ್ವೀಕಾರ ಸಮಾರಂಭ ವೀಕ್ಷಣೆ ಬಳಿಕ ಅರ್ಜಿದಾರರು ಮನೆಗೆ ವಾಪಸ್ಸಾಗುತ್ತಿದ್ದರು. ಈ ವೇಳೆ 25 ಜನರಿದ್ದ ಒಂದು ಗುಂಪು ಅರ್ಜಿದಾರರನ್ನು ತಡೆದು, ಏಕೆ ‘ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗುತ್ತಿದ್ದೀರಾ ಎಂದು ಆಕ್ಷೇಪಿಸಿತ್ತು. ಆ ಸಂದರ್ಭದಲ್ಲಿ ಅರ್ಜಿದಾರರೊಬ್ಬರಿಗೆ ಚಾಕುವಿಂದ ಚುಚ್ಚಲಾಗಿತ್ತು. ಈ ಕುರಿತು ಅರ್ಜಿದಾರರು ದೂರು ದಾಖಲಿಸಿದ್ದರು.

ಆದರೆ, ಮರು ದಿನ ಮುಸ್ಲಿಂ ವ್ಯಕ್ತಿ. ಪಿ.ಕೆ.ಅಬ್ದುಲ್ಲಾ ಎಂಬಾತ ಮಂಗಳೂರಿನ ಕೊಣಾಜೆ ಪೊಲೀಸ್ ಠಾಣೆಗೆ ದೂರು ನೀಡಿ, ಅರ್ಜಿದಾರರು ಮಸೀದಿ ಮುಂದೆ 11ಮಂದಿ ಬಂದು ಬೆದರಿಕೆ ಹಾಕಿದರು ಎಂದು ಆರೋಪಿಸಿದ್ದರು. ಅದರಂತೆ ಪೊಲೀಸರು ಐಪಿಸಿ ಸೆಕ್ಷನ್ 153 ಎ ಅಡಿಯಲ್ಲಿ ಎರಡು ಧರ್ಮಗಳ ನಡುವೆ ದ್ವೇಷ ಹರಡಿದ ಆರೋಪದಡಿ ಅರ್ಜಿದಾರರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಈ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.

ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಅರ್ಜಿದಾರರು ಹೂಡಿದ ಪ್ರಕರಣಕ್ಕೆ ಪ್ರತಿಯಾಗಿ ಈ ಪ್ರಕರಣ ದಾಖಲಿಸಲಾಗಿದೆ. ಇದರಲ್ಲಿ ಐಪಿಸಿ ಸೆಕ್ಷನ್ 153ಎ ಆನ್ವಯವಾಗುವ ಒಂದೇ ಒಂದು ಅಂಶವಿಲ್ಲ, ವಾಸ್ತವವಾಗಿ ಧರ್ಮ-ಭಾಷೆ ಸೇರಿದಂತೆ ವಿವಿಧ ಅಂಶಗಳನ್ನು ಮುಂದಿಟ್ಟುಕೊಂಡು ಬೇರೆ ಬೇರೆ ಗುಂಪುಗಳ ನಡುವೆ ದ್ವೇಷ ಭಾವನೆ ಮೂಡಿಸುವ ಘಟನೆ ನಡೆದಿರಬೇಕಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಅಂತಹ ಘಟನೆ ನಡೆದಿಲ್ಲ. ಐಪಿಸಿ ಸೆಕ್ಷನ್ 153 ದುರ್ಬಳಕೆಗೆ ಈ ಪ್ರಕರಣ ಉತ್ತಮ ಉದಾಹರಣೆಯಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ಅಲ್ಲದೆ, ಅರ್ಜಿದಾರರು ಬರೀ ‘ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗಿದ್ದಾರೆ ಹಾಗೂ ಪ್ರಧಾನ ಮಂತ್ರಿಯನ್ನು ಹೊಗಳಿದ್ದಾರೆ. ದ್ವೇಷ ಹರಡಿದ ಅಂಶವು ದೂರಿನಲ್ಲಿಯೇ ಉಲ್ಲೇಖಿಸಿಲ್ಲ ವಾಸ್ತವ ಅಂಶ ಪರಿಗಣಿಸಿದರೆ ‘ಭಾರತ್ ಮಾತಾ ಕಿ ಜೈ” ಎಂದು ಘೋಷಣೆ ಕೂಗಿರುವುದು ಕೇವಲ ಸಾಮರಸ್ಯ ಉತ್ತೇಜಿಸುತ್ತದೆಯೇ ಹೊರತು ದ್ವೇಷವನ್ನಲ್ಲ, ಹಾಗಾಗಿ, ಅರ್ಜಿದಾರರ ವಿರುದ್ಧದ ಪ್ರಕರಣ ರದ್ದು ಪಡಿಸಲಾಗುತ್ತಿದೆ ಎಂದು ನ್ಯಾಯಾಲಯ ತೀರ್ಪಿನಲ್ಲಿ ತಿಳಿಸಿದೆ.

ಮೂಲ: LAW TIME


Share It

You cannot copy content of this page