ಬೆಂಗಳೂರು: ರಾಜ್ಯ ವಕ್ಫ್ ಬೋರ್ಡ್‌ನಿಂದ ಮುಸ್ಲಿಮರ ವಿವಾಹ ನೋಂದಣಿ ಪತ್ರ ವಿತರಣೆ ಅಧಿಕಾರ ಸಂಬಂಧ ಉತ್ತರಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ವಿವಾಹ ನೋಂದಣಿ ಪ್ರಮಾಣ ಪತ್ರ ವಿತರಿಸುವ ಅಧಿಕಾರದ ಬಗ್ಗೆ ಎಲ್ಲೂ ಕೇಳಿಲ್ಲವಲ್ಲ’ ಎಂಬ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿರುವ ಹೈಕೋರ್ಟ್, ‘ಯಾವ ಕಾನೂನಿನ ಅಧಿಕಾರವನ್ನು ಬಳಸಿ ಇಂತಹ ಆದೇಶ ಹೊರಡಿಸಲಾಗಿದೆ ಎಂಬ ಬಗ್ಗೆ ಉತ್ತರಿಸಿ’ ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
‘ವಕ್ಫ್ ಮಂಡಳಿಗಳಿಗೆ ಮುಸ್ಲಿಂ ವಿವಾಹಗಳನ್ನು ಕಡ್ಡಾಯವಾಗಿ ನೋಂದಾಯಿಸುವ ಯಾವುದೇ ಶಾಸನಾತ್ಮಕ ಅಧಿಕಾರ ಇಲ್ಲ’ ಎಂದು ಆಕ್ಷೇಪಿಸಿ ಆಲಂ ಪಾಷ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, “ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಎರಡು ವಾರ ಕಾಲಾವಕಾಶ ನೀಡಬೇಕು’ ಎಂದು ಮನವಿ ಮಾಡಿದರು. ಆದರೆ, ಇದಕ್ಕೆ ಅಸಮ್ಮತಿ ವ್ಯಕ್ತಪಡಿಸಿದ ನ್ಯಾಯಪೀಠ ವಿಚಾರಣೆಯನ್ನು ಇದೇ 21ಕ್ಕೆ ಮುಂದೂಡಿತು.