ಬೆಂಗಳೂರು: ಶಿಕ್ಷಕ ಹುದ್ದೆಗಳನ್ನು ಕಡಿಮೆ ದೃಷ್ಟಿದೋಷ ಉಳ್ಳವರಿಗೆ ಮಾತ್ರವೇ ಮೀಸಲಿಟ್ಟಿದ್ದು, ಸಂಪೂರ್ಣ ಅಂಧತ್ವ ಹೊಂದಿರುವವರಿಗೆ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂಬ ಸರ್ಕಾರದ ವಾದವನ್ನು ತಿರಸ್ಕರಿಸಿರುವ ಹೈಕೋರ್ಟ್ ಆಯ್ಕೆಪಟ್ಟಿಯ ಅನುಸಾರ ಶೇ.100% ಅಂಧತ್ವ ಹೊಂದಿರುವ ಮಹಿಳೆಯನ್ನು ಶಿಕ್ಷಕರ ಹುದ್ದೆಗೆ ಪರಿಗಣಿಸಿ ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಮೈಸೂರು ಜಿಲ್ಲೆ, ಪಿರಿಯಾಪಟ್ಟಣ ತಾಲ್ಲೂಕಿನ ಹಂಡಿತವಳ್ಳಿಯ ಎಚ್.ಎನ್.ಲತಾ ಅವರು ಸಂಪೂರ್ಣ ಅಂಧತ್ವ ಹೊಂದಿದ್ದು ಶಿಕ್ಷಕರ ಹುದ್ದೆಗೆ ಅರ್ಜಿ (ಡಬ್ಲ್ಯು.ಪಿ 19994/2024) ಸಲ್ಲಿಸಲು ಅವಕಾಶ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯು ಅವಕಾಶ ಮಾಡಿಕೊಟ್ಟಿತ್ತು. ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಮೇಲಿನಂತೆ ಆದೇಶಿಸಿದೆ.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠ ಇಲಾಖೆಯು ಶಿಕ್ಷಕರ ಹುದ್ದೆ ಪಡೆಯುವ ಪ್ರಕ್ರಿಯೆಯಲ್ಲಿ ಭಾಗವಹಿಸಲು ಕಡಿಮೆ ದೃಷ್ಟಿ ಹೊಂದಿದವರ ಜೊತೆಗೆ ಸಂಪೂರ್ಣ ಅಂಧತ್ವಕ್ಕೆ ಗುರಿಯಾದವರಿಗೂ ಅವಕಾಶ ನೀಡಬೇಕಾಗಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿದರೆ ಅಂಗವಿಕಲರ ಸಮಾನ ಅವಕಾಶಗಳು, ಹಕ್ಕುಗಳ ರಕ್ಷಣೆ ಮತ್ತು ಪಾಲುದಾರಿಕೆಯ ಸಂಪೂರ್ಣ ಅವಕಾಶ ಕಾಯ್ದೆ- 1995 ಹಾಗೂ ಅಂಗವಿಕಲರ ಕಾಯ್ದೆ-2016 ಅನ್ನು ಉಲ್ಲಂಘಿಸಿದಂತಾಗುತ್ತದೆ’ ಎಂದು ನ್ಯಾಯಪೀಠ ಸ್ಪಷ್ಟವಾಗಿ ಉಲ್ಲೇಖಿಸಿದೆ.