ದೆಹಲಿ: 6 ದಶಕಗಳ ಹಿಂದೆ ನಡೆದಿರುವ ಭೂ ಸ್ವಾಧೀನ ಪ್ರಕರಣದ ಮಾಲಿಕರಿಗೆ ಎರಡು ವಾರಗಳಲ್ಲಿ ಪರಿಹಾರ ಪಾವತಿಸದೇ ಹೋದಲ್ಲಿ ನಿಮ್ಮ ಸರ್ಕಾರದ ಜನಪ್ರಿಯ ಉಚಿತ ಕೊಡುಗೆಗಳ ಯೋಜನೆಗೆ ತಡೆ ನೀಡಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಮಹಾರಾಷ್ಟ್ರ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದೆ.
ಸರ್ಕಾರಕ್ಕೆ ಉಚಿತ ಕೊಡುಗೆಗಳನ್ನು ನೀಡಲು ಸಾವಿರಾರು ಕೋಟಿ ರೂಪಾಯಿ ಹಣವಿದೆ. ಆದರೆ ಭೂಮಿ ಕಳೆದುಕೊಂಡವರಿಗೆ ಪರಿಹಾರ ಪಾವತಿಸಲು ಹಣ ಇಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿರುವ ನ್ಯಾ. ಬಿ.ಆರ್ ಗವಾಯಿ ಹಾಗೂ ನ್ಯಾ. ಕೆ.ವಿ ವಿಶ್ವನಾಥನ್ ಅವರಿದ್ದ ಪೀಠ ಈ ಎಚ್ಚರಿಕೆ ನೀಡಿದೆ.
ಆಗಸ್ಟ್ 28ರೊಳಗೆ ಪರಿಹಾರ ಪಾವತಿಸದಿದ್ದರೆ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಸಮನ್ಸ್ ನೀಡಬೇಕಾಗುತ್ತದೆ ಹಾಗೂ ಬಜೆಟ್‌ನಲ್ಲಿ ಘೋಷಿಸಿದ ಜನಪ್ರಿಯ ಯೋಜನೆಗಳಿಗೆ ತಡೆ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದೆ.
ಭೂಮಾಲಿಕರಿಗೆ ಪರಿಹಾರ ನೀಡುವಂತೆ ಈ ಹಿಂದೆ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನು ಪಾಲಿಸಲಾಗಿದೆಯೇ ಎನ್ನುವ ಕುರಿತಂತೆ ನ್ಯಾಯಾಪೀಠ ವಿಚಾರಣೆ ನಡೆಸಿತು. ವಿಚಾರಣೆ ವೇಳೆ, ಪರಿಹಾರ ಮೊತ್ತ ನಿಗದಿ ಮಾಡಬೇಕಿದ್ದು, ಇನ್ನೂ ಪರಿಹಾರ ಪಾವತಿಸಿಲ್ಲ ಎಂದು ರಾಜ್ಯ ಸರ್ಕಾರ ತಿಳಿಸಿತು. ಇದಕ್ಕೆ ಅಸಮಾಧಾನಗೊಂಡ ನ್ಯಾಯಪೀಠ, ಸರ್ಕಾರದ ವಿರುದ್ಧ ಕಟು ಟೀಕೆ ವ್ಯಕ್ತಪಡಿಸಿತು.
ಅಲ್ಲದೆ, ಪ್ರಕರಣದ ಮುಂದಿನ ವಿಚಾರಣೆ ವೇಳೆಗೆ ಈ ಸಂಬಂಧ ಸೂಕ್ತ ನಿರ್ಧಾರ ಕೈಗೊಳ್ಳದೆ ಹೋದರೆ ಭೂ ಸ್ವಾಧೀನ ಕಾಯ್ದೆ ಅಡಿ ಲಭ್ಯವಿರುವ ಅತಿ ಹೆಚ್ಚಿನ ಪರಿಹಾರವನ್ನು ನೀಡಲು ಆದೇಶಿಸುವುದಾಗಿ ಸುಪ್ರೀಂಕೋರ್ಟ್ ಸರ್ಕಾರಕ್ಕೆ ಎಚ್ಚರಿಸಿದೆ.
ಚುನಾವಣೆಯ ಹೊಸ್ತಿಲಿನಲ್ಲಿರುವ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರ ಈ ವರ್ಷದ ಬಜೆಟ್ ವೇಳೆ ವಿವಿಧ ಜನಪ್ರಿಯ ಯೋಜನೆಗಳನ್ನು ಘೋಷಿಸಿತ್ತು. ಈ ಯೋಜನೆಗಳು ಸರ್ಕಾರಕ್ಕೆ 96,000 ಕೋಟಿಗಳಷ್ಟು ಹೆಚ್ಚುವರಿ ಹೊರೆಯಾಗಿದೆ. ಇವುಗಳಲ್ಲಿ ಮುಖ್ಯಮಂತ್ರಿ ಮಝಿ ಲಡ್ಕಿ ಬೆಹನ್ ಯೋಜನೆ ಅಡಿ 21 ರಿಂದ 65 ವಯಸ್ಸಿನ ನಡುವಿನ ಅರ್ಹ ಮಹಿಳೆಯರಿಗೆ ಮಾಸಿಕ ₹ 1,500 ನೀಡಲಾಗುತ್ತದೆ.
ಮೂಲ-LAW TIME