ಸುದ್ದಿ

ವಾಮಾಚಾರ ಮಾಡಿ ಕೊಲೆ ಯತ್ನ ಆರೋಪ: ಪತ್ನಿ ವಿರುದ್ಧ ಪತಿ ದಾಖಲಿಸಿದ್ದ ಕೇಸ್ ರದ್ದು

Share It

ಬೆಂಗಳೂರು: ಬ್ಲ್ಯಾಕ್‌ ಮ್ಯಾಜಿಕ್‌ ಬಳಸಿ ನನ್ನನ್ನು ಮತ್ತು ನನ್ನ ತಾಯಿಯನ್ನು ಕೊಲೆ ಮಾಡಲು ಪತ್ನಿ ಯತ್ನಿಸುತ್ತಿದ್ದಾಳೆ ಎಂದು ಆರೋಪಿಸಿ ಪತಿ ದಾಖಲಿಸಿದ್ದ ಪ್ರಕರಣವನ್ನು ಹೈಕೋರ್ಟ್‌ ರದ್ದುಪಡಿಸಿದೆ.

ಬೆಂಗಳೂರಿನ ಮೊಹಮ್ಮದ್‌ ಶಾಹೀದ್‌ ಹಾಗೂ ಅವರ ಪತ್ನಿ ಪ್ರತ್ಯೇಕವಾಗಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ನೀಡಿದೆ.

ಪತಿಯ ದೂರಿನ ಮೇರೆಗೆ ಪತ್ನಿ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಹಾಗೂ ಕರ್ನಾಟಕ ಅಮಾನವೀಯ ದುಷ್ಟ ಪದ್ಧತಿಗಳು ಮತ್ತು ವಾಮಾಚಾರ ತಡೆ ಮತ್ತು ನಿರ್ಮೂಲನೆ ಕಾಯ್ದೆ 2017ರಡಿ ದಾಖಲಿಸಿದ್ದ ಖಾಸಗಿ ದೂರನ್ನು ಆಧರಿಸಿ ಮ್ಯಾಜಿಸ್ಪ್ರೇಟ್‌ ಕೋರ್ಟ್, ಪತ್ನಿ ವಿರುದ್ಧ ತನಿಖೆಗೆ ನೀಡಿದ್ದ ಆದೇಶವನ್ನು ರದ್ದು ಪಡಿಸಿದೆ.

ಜತೆಗೆ, ಸಿಆರ್‌ಪಿಸಿ ಸೆಕ್ಷನ್‌ 200ರಡಿಯಲ್ಲಿ ಪತಿ ದಾಖಲಿಸಿರುವ ದೂರಿನ ಬಗ್ಗೆ ಯಾಂತ್ರಿಕವಾಗಿ ತನಿಖೆಗೆ ಆದೇಶಿಸುವ ಮುನ್ನ ಮ್ಯಾಜಿಸ್ಪ್ರೇಟ್‌ ನ್ಯಾಯಾಧೀಶರು ಸ್ವಲ್ಪ ವಿವೇಚನೆಯನ್ನು ಬಳಸಬೇಕಿತ್ತು. ಹಾಗೆ ಮಾಡಿದ್ದರೆ ನಕಲಿ ಕೇಸುಗಳನ್ನು ಬುಡದಲ್ಲಿಯೇ ಕಿತ್ತುಹಾಕಬಹುದಿತ್ತು. ಪತಿ-ಪತ್ನಿ ನಡುವಿನ ಸಾಮಾನ್ಯ ಕೌಟುಂಬಿಕ ಜಗಳಕ್ಕೆ ಬ್ಲ್ಯಾಕ್‌ ಮ್ಯಾಜಿಕ್‌, ಕಳವು ಮತ್ತು ಕೊಲೆಯತ್ನ ಆರೋಪಗಳನ್ನು ಹೊರಿಸಲಾಗಿದೆ ಎಂದು ಪೀಠ ತನ್ನ ಆದೇಶದಲ್ಲಿ ಹೇಳಿದೆ.

ಕಾಯ್ದೆಯ ಸೆಕ್ಷನ್ 3 ರ ವಿವಿಧ ನಿಬಂಧನೆಗಳನ್ನು ಉಲ್ಲೇಖಿಸಿರುವ ಹೈಕೋರ್ಟ್, ಯಾವುದೇ ಅಮಾನವೀಯ ದುಷ್ಟ ಅಭ್ಯಾಸ ಅಥವಾ ಮಾಟಮಂತ್ರದ ಕ್ರಿಯೆ ಇಲ್ಲಿ ನಡೆದಿರುವುದಕ್ಕೆ ಪುರಾವೆಗಳಿಲ್ಲ. ವಾಟ್ಸಾಪ್ ಚಾಟ್ ನಲ್ಲಿ ಬ್ಲ್ಯಾಕ್ ಮ್ಯಾಜಿಕ್ ಕುರಿತಂತೆ ನೋಡಿದ್ದೇನೆ ಎಂದು ಪತಿ ಹೇಳಿದ್ದಾರೆ. ವಾಟ್ಸಾಪ್ ಚಾಟ್ ಮೆಸೇಜ್ ಗಳು ಕೂಡ ಅಸ್ಪಷ್ಟವಾಗಿವೆ. ಹಾಗಾಗಿ ಸೆಕ್ಷನ್ 3 ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಅಲ್ಲದೇ, ಪತ್ನಿ ಸಲ್ಲಿಸಿದ್ದ ವರದಕ್ಷಿಣೆ ಕಿರುಕುಳ ದೂರಿಗೆ ಪ್ರತಿಯಾಗಿ ಪತಿ ಈ ದೂರು ದಾಖಲಿಸಿದ್ದಾರೆ. ಅಲ್ಲದೆ, ತನ್ನ ಜೇಬಿನಿಂದ ಕದ್ದ ಹಣವನ್ನು ಕೊಲೆಗೆ ಸುಪಾರಿ ನೀಡಿದ್ದಾರೆಂದು ಪತಿ ಆರೋಪಿಸಿದ್ದಾರೆ. ಅದನ್ನು ಒಪ್ಪಲಾಗದು. ಎಲ್ಲಾ ರೀತಿಯಲ್ಲೂ ದೂರು ಸ್ವೀಕಾರಾರ್ಹವಲ್ಲ. ಪತಿ ಅನಗತ್ಯವಾಗಿ ಪತ್ನಿ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ನ್ಯಾಯಪೀಠ ತೀರ್ಪಿನಲ್ಲಿ ತಿಳಿಸಿದೆ.

ಇನ್ನು ಮತ್ತೊಂದು ಪ್ರಕರಣದಲ್ಲಿ, ಪತಿ ಮತ್ತು ಅತ್ತೆ ವಿರುದ್ಧ ಪತ್ನಿ ಸಲ್ಲಿಸಿದ್ದ ವರದಕ್ಷಿಣೆ ಕಿರುಕುಳ ಪ್ರಕರಣವನ್ನು ರದ್ದುಗೊಳಿಸಲು ನಿರಾಕರಿಸಿರುವ ಹೈಕೋರ್ಟ್, ಪ್ರಕರಣದಲ್ಲಿ ಆರೋಪಿಯಾಗಿದ್ದ ಪತಿಯ ತಾಯಿಯ ವಿರುದ್ಧದ ಆರೋಪಗಳನ್ನು ರದ್ದುಪಡಿಸಿದೆ.

ಪ್ರಕರಣದ ಹಿನ್ನೆಲೆ: ಪತ್ನಿ ಬ್ಲ್ಯಾಕ್‌ ಮ್ಯಾಜಿಕ್‌ ಬಳಸಿ ತನ್ನನ್ನು ಮತ್ತು ತನ್ನ ತಾಯಿಯನ್ನು ಕೊಲೆ ಮಾಡಲು ಯತ್ನಿಸುತ್ತಿದ್ದಾರೆಂದು ಆರೋಪಿಸಿದ್ದ ಪತಿ 2023ರ ಫೆ.21ರಂದು ಮ್ಯಾಜಿಸ್ಟೇಟ್‌ ಕೋರ್ಟ್‌ನಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಆ ಕುರಿತು ವಿಚಾರಣೆ ನಡೆಸಿದ್ದ ಮ್ಯಾಜಿಸ್ಟ್ರೇಟ್‌, ಸಿಆರ್‌ಪಿಸಿ ಸೆಕ್ಷನ್‌ 156(2) ಅಡಿ ತನಿಖೆಗೆ ಆದೇಶಿಸಿದ್ದರು. ಅದರಂತೆ ಪೊಲೀಸರು ಎಫ್‌ಐಆರ್‌ ದಾಖಲಿಸಿ ತನಿಖೆ ಆರಂಭಿಸಿದ್ದರು. ಇದನ್ನು ಪ್ರಶ್ನಿಸಿ ಪತ್ನಿ ಹೈಕೋರ್ಟ್ ಮೆಟ್ಟಿಲೇರಿದ್ದರು.
(WRIT PETITION No.19687 OF 2023) (CRIMINAL PETITION No.9653 OF 2023)
ಮೂಲ:- LAW TIME


Share It

You cannot copy content of this page