ಸುದ್ದಿ

ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣ: ವಿಚಾರಣೆ ಆ. 31ಕ್ಕೆ ಮುಂದೂಡಿದ ಹೈಕೋರ್ಟ್

Share It

ಬೆಂಗಳೂರು: ಮೈಸೂರಿನ ಮುಡಾ ಸೈಟ್ ‌ಹಗರಣದ ಬಗ್ಗೆ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಶನ್ ಗೆ ಅನುಮತಿ ನೀಡಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಆಗಸ್ಟ್ 31ಕ್ಕೆ ಮುಂದೂಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಪೀಠ ಇಂದು ಮಧ್ಯಾಹ್ನ ವಿಚಾರಣೆ ಆರಂಭಿಸಿತು. ಈ ವೇಳೆ ಸಿಎಂ ಸಿದ್ದರಾಮಯ್ಯ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಕೆಲ ಕಾಲ ವಾದ ಮಂಡಿಸಿದರು. ರಾಜ್ಯಪಾಲರ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ವಾದ ಮಂಡನೆಗೆ ಕಾಲಾವಕಾಶ ಕೋರಿದರು. ಇದಕ್ಕೆ ಸಮ್ಮತಿಸಿದ ಹೈಕೋರ್ಟ್ ವಿಚಾರಣೆಯನ್ನು ಇದೇ ಶನಿವಾರ ಬೆಳಗ್ಗೆ ‌10:30 ಕ್ಕೆ ಮುಂದೂಡಿತು.

ಸಿಎಂ ಪರ ವಕೀಲರ ವಾದ ಮಂಡನೆ ಸಾರಾಂಶ: ಭ್ರಷ್ಟಾಚಾರ ತಡೆ ಕಾಯ್ದೆ 17 ಎ ಬಗ್ಗೆ ನಾನು ವಾದಿಸಿದ್ದೆ. ಇದೊಂದೇ ಅಂಶದ ಆಧಾರದಲ್ಲಿ ರಾಜ್ಯಪಾಲರ ಆದೇಶ ರದ್ದುಪಡಿಸಬೇಕು. ಪಿ.ಸಿ. ಕಾಯ್ದೆ 17 ಎ ಅಡಿ ಪೂರ್ವಾನುಮತಿ ಬೇಕು. 17 ಎ ಮಾನದಂಡ ಪಾಲನೆಯಾಗದಿದ್ದರೂ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಪೊಲೀಸ್ ಅಧಿಕಾರಿ ಅನುಮತಿ ಪಡೆಯದೇ ತನಿಖೆ ಮಾಡುವಂತಿಲ್ಲ. ಸಾರ್ವಜನಿಕ ಸೇವಕನ ಶಿಫಾರಸು, ನಿರ್ಧಾರಗಳ ಕುರಿತಾದ ತನಿಖೆ ಇರಬೇಕು. ಈ ಎರಡೂ ಅಂಶಗಳನ್ನು ರಾಜ್ಯಪಾಲರು ಪಾಲಿಸಿಲ್ಲ. ಈ ಕುರಿತಂತೆ ಸುಪ್ರೀಂ ಕೋರ್ಟ್ ಹಾಗೂ ಕರ್ನಾಟಕ ಹೈಕೋರ್ಟ್ ನ ಆದೇಶಗಳಿವೆ. ಈ ಕುರಿತೂ ನಾನು ವಾದ ಮಂಡಿಸಲಿದ್ದೇನೆ.

ಪ್ರತಿವಾದಿ ಟಿಜೆ ಅಬ್ರಹಾಂ ಸಲ್ಲಿಸಿರುವ ಆಕ್ಷೇಪಣೆ ಗಮನಿಸಬೇಕು. 17 ಎ ಅಡಿ ಪೂರ್ವಾನುಮತಿ ಬೇಕಿಲ್ಲವೆಂದು ಹೇಳಿದ್ದಾರೆ. ಇವೆಲ್ಲ ಕೇವಲ ಪ್ರಕ್ರಿಯೆಗಳಷ್ಟೇ ಎಂದಿದ್ದಾರೆ. ರಾಜ್ಯಪಾಲರು 17 ಎ ಅಡಿ ಅನುಮತಿ ನೀಡಿದ್ದಾರೆ. ಆದರೆ ದೂರುದಾರ ಈಗ ಪೂರ್ವಾನುಮತಿ ಬೇಕಿಲ್ಲವೆನ್ನುತ್ತಿದ್ದಾರೆ. ಹೀಗಾಗಿ ರಾಜ್ಯಪಾಲರ ಸಮಯ ವ್ಯರ್ಥ ಮಾಡಿದ್ದಕ್ಕೆ ದಂಡ ವಿಧಿಸಬೇಕು.‌ ಪ್ರಾಸಿಕ್ಯೂಷನ್ ಗೆ ನೀಡಿರುವ ಅನುಮತಿಯನ್ನು ಹಿಂಪಡೆಯಬೇಕು. ರಾಜ್ಯಪಾಲರ ಮುಂದೆ ಒಂದು, ಕೋರ್ಟ್ ಮುಂದೆ ಒಂದು ಹೇಳಿಕೆ ನೀಡುತ್ತಿದ್ದಾರೆ ಎಂದರು.

ಅಲ್ಲದೇ, ರಾಜ್ಯಪಾಲರು ತರಾತುರಿಯಲ್ಲಿ ವಿವೇಚನೆ ಬಳಸದೇ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ. ಇಬ್ಬರ ದೂರುಗಳಿಗೆ ಸಂಬಂಧಿಸಿದಂತೆ ಶೋಕಾಸ್ ನೋಟಿಸ್ ನೀಡಿಲ್ಲ. ದೂರುದಾರರು ತಮ್ಮ ಪ್ರಮಾಣಪತ್ರದಲ್ಲಿ 17 ಎ ಬೇಕಿಲ್ಲವೆಂಬುದಕ್ಕೆ ಕಾರಣ ನೀಡಿದ್ದಾರೆ. ಸಿಎಂ ಆದೇಶ ಅಥವಾ ಶಿಫಾರಸು ಪ್ರಶ್ನಿಸಿಲ್ಲವಾದ್ದರಿಂದ 17 ಎ ಬೇಕಿಲ್ಲವೆಂದಿದ್ದಾರೆ ಎಂದರು.

ಡಿನೋಟಿಫಿಕೇಷನ್ ಗಾಗಿ ಸಿದ್ದರಾಮಯ್ಯ ಅವರು ಯಾವುದೇ ಪ್ರತಿಫಲ ಪಡೆದಿಲ್ಲ. 2004 ರಲ್ಲಿ ಸಿಎಂ ಮೈದುನನಿಗೆ ಜಮೀನು ವರ್ಗಾವಣೆಯಾಯಿತು. 2005 ರಲ್ಲಿ ಭೂಮಿಯನ್ನು ಕೃಷಿಯೇತರ ಭೂಮಿಯಾಗಿ ಪರಿವರ್ತನೆ ಮಾಡಲಾಯಿತು. 2010 ರಲ್ಲಿ ಸಿಎಂ ಪತ್ನಿ ಭೂಮಿಯನ್ನು ಖರೀದಿ ಮಾಡಿದರು. ಜಮೀನಿಗೆ ಬದಲಿಯಾಗಿ ನಿವೇಶನ ಪಡೆದಿದ್ದಾರೆ. ಇದನ್ನು ದೊಡ್ಡ ಹಗರಣದಂತೆ ಬಿಂಬಿಸಲಾಗುತ್ತಿದೆ. 10-15 ವರ್ಷ ಹಳೆಯ ಘಟನೆಗಳಿಗೆ ಈಗಿನ ಕಾನೂನು ಅನ್ವಯಿಸಲಾಗುತ್ತಿದೆ. ಇದೇ ವೇಳೆ ಇತರೆ ರಾಜಕಾರಣಿಗಳಾದ ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಹೆಚ್.ಡಿ.ಕುಮಾರಸ್ವಾಮಿ ಇವರುಗಳ ವಿರುದ್ಧ ಆರೋಪಪಟ್ಟಿ ಸಿದ್ಧವಾಗಿದ್ದರೂ ರಾಜ್ಯಪಾಲರು ಅನುಮತಿ ನೀಡುತ್ತಿಲ್ಲ‌ ಎಂದು ಆಕ್ಷೇಪಿಸಿದರು.

ರಾಜ್ಯಪಾಲರು ಯಾವುದೇ ಒಂದು ಅಂಶದ ಬಗ್ಗೆಯೂ ವಿವೇಚನೆ ಬಳಸಿಲ್ಲ. ಕ್ಯಾಬಿನೆಟ್ ಸಲಹೆಯನ್ನೂ ರಾಜ್ಯಪಾಲರು ಪಾಲಿಸಿಲ್ಲ. ಈ ರೀತಿಯ ವಿಚಾರಗಳಿಗೆ ಕ್ಯಾಬಿನೆಟ್ ಸೂಚನೆ ಪರಿಗಣಿಸಬೇಕು. ರಾಜ್ಯಪಾಲರು ತಮ್ಮ ನಿರ್ಧಾರಕ್ಕೆ ಕಾರಣಗಳನ್ನು ನೀಡಿಲ್ಲ. ಕೇವಲ 4 ಪುಟಗಳ ಅನುಮತಿಯನ್ನಷ್ಟೇ ನೀಡಿದ್ದಾರೆ. ಡಿನೋಟಿಫಿಕೇಷನ್ ಆದೇಶವನ್ನು ಈ ಹಿಂದೆಯೂ ಹಲವರು ಮಾಡಿದ್ದಾರೆ. ಯಾವ ಆಧಾರದ ಮೇಲೆ ಪ್ರಾಸಿಕ್ಯೂಷನ್ ಅನುಮತಿ ನೀಡಿದ್ದಾರೆ ತಿಳಿಯುತ್ತಿಲ್ಲ. ರಾಜ್ಯಪಾಲರ ಅಧಿಕಾರಗಳಿಗೆ ನಿರ್ಬಂಧಗಳಿವೆ. ಹೀಗಾಗಿ ರಾಜ್ಯಪಾಲರೂ ಸಹಜ ನ್ಯಾಯದ ಪ್ರಕ್ರಿಯೆ ಪಾಲಿಸಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿದರು. ಹಾಗೆಯೇ, ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ನೀಡಿರುವ ಅನುಮತಿ ರದ್ದುಪಡಿಸಬೇಕು ಎಂದು ಮನವಿ ಮಾಡಿದರು.


Share It

You cannot copy content of this page