ಕಾನೂನು

ಕೋರಿದ್ದು ವಿಚ್ಛೇದನ, ನ್ಯಾಯಾಧೀಶರು ಮಾಡಿಸಿದ್ದು ಮರು ಸಂಧಾನದ ಬೆಸುಗೆ! ಲೋಕಾ ಅದಾಲತ್ ನಲ್ಲಿ ಒಂದಾದ 14 ಜೋಡಿಗಳು

Share It

ಕೊಪ್ಪಳ: ಕೌಟುಂಬಿಕ, ವೈಯಕ್ತಿಕ ಸಮಸ್ಯೆ ಹೊತ್ತು ವಿಚ್ಚೇಧನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದ ಹದಿನಾಲ್ಕು ಜೋಡಿಗಳಿಗೆ ಮರು ಹೊಂದಾಣಿಕೆ ಮಾಡಿದ ನ್ಯಾಯಾಧೀಶರು ಹಾಗೂ ವಕೀಲರು..!
ಹೌದು.. ! ಗೌರವಾನ್ವಿತ ಕೊಪ್ಪಳ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಚಂದ್ರಶೇಖರ ಸಿ ಅವರು ವಿಶೇಷ ಮುತುವರ್ಜಿ ವಹಿಸಿ ಸೆ.14ರಂದು ಆಯೋಜನೆ ಮಾಡಿದ್ದ ರಾಷ್ಟೀಯ ಲೋಕ್ ಅದಾಲತ್ ಕಾರ್ಯಕ್ರಮವು ಇಂತಹ ವಿಶೇಷತೆಯ ಮೂಲಕ ಹೊಸ ಇತಿಹಾಸ ಬರೆಯಿತು. ರಾಜೀ ಸಂಧಾನದ ಮೂಲಕ ಹೆಚ್ಚಿನ ಪ್ರಕರಣಗಳು ಇತ್ಯಾರ್ಥವಾಗಿದ್ದು ಈ ಲೋಕ ಅದಾಲತ್‌ನ ವಿಶೇಷತೆಯಾಗಿತ್ತು.

ಕೌಟುಂಬಿಕ ಭಿನ್ನಾಭಿಪ್ರಾಯ, ಹಣಕಾಸು ಸಮಸ್ಯೆ, ಕುಡಿತ, ಸೋಮಾರಿತನ, ಅನುಮಾನ ಹೀಗೆ ನಾನಾ ಕಾರಣಕ್ಕೆ ಸಂಸಾರದಲ್ಲಿನ ಸಮಸ್ಯೆಯಿಂದ ವಿಚ್ಛೇಧನ ಕೋರಿ ಹದಿನಾಲ್ಕು ಜೋಡಿಗಳು ನ್ಯಾಯಾಲಯದ ಮೆಟ್ಟಿಲು ಏರಿದ್ದರು.

ಸೆ.14ರಂದು ಕೊಪ್ಪಳ ಜಿಲ್ಲೆಯಾದ್ಯಂತ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಕೊಪ್ಪಳ ಜಿಲ್ಲೆಯ ಕೊಪ್ಪಳ, ಗಂಗಾವತಿ, ಕುಷ್ಟಗಿ ಹಾಗೂ ಯಲಬುರ್ಗಾ ನ್ಯಾಯಾಲಯಗಳ ಆವರಣದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ನಾಲ್ಕು ನ್ಯಾಯಾಲಯದಲ್ಲಿನ ನ್ಯಾಯಾಧೀಶರು ಹಾಗೂ ವಕೀಲರು ಸೇರಿ ಸಮಸ್ಯೆಯ ಬಗ್ಗೆ ಆಪ್ತ ಸಮಾಲೋಚನೆ ಮಾಡುವ ಮೂಲಕ ಹದಿನಾಲ್ಕು ಜೋಡಿಗಳ ಸಂಸಾರದಲ್ಲಿನ ಅಪಸ್ವರ, ಬಿರುಕನ್ನು ಹೋಗಲಾಡಿಸಿದರು.

ವಿಚ್ಛೇಧನ ಕೋರಿ ಅರ್ಜಿ ಸಲ್ಲಿಸಿದ ಪೈಕಿ ಕೊಪ್ಪಳ ನ್ಯಾಯಾಲಯದಲ್ಲಿ ಐದು ಜೋಡಿಗಳು, ಗಂಗಾವತಿ ತಾಲೂಕಿನಲ್ಲಿ ಎಂಟು ಜೋಡಿಗಳು ಹಾಗೂ ಯಲಬುರ್ಗಾ ತಾಲೂಕಿನಲ್ಲಿ ಒಂದು ಜೋಡಿಯು ಕೌಟುಂಬಿಕ, ವೈಯಕ್ತಿಕ ಸಮಸ್ಯೆಗಳನ್ನು ಹೊತ್ತು ನ್ಯಾಯಾಲಯಕ್ಕೆ ಬಂದಿದ್ದರು. ಈ ಹದಿನಾಲ್ಕು ಜೋಡಿಗಳ ಬಗ್ಗೆ ವಿಶೇಷ ಕಾಳಜಿ ವಹಿಸಿದ ನ್ಯಾಯಾಧೀಶರು ಹಾಗೂ ವಕೀಲರು, ಮರು ಹೊಂದಾಣಿಕೆ ಮಾಡಿ ಸುಳಿಗಾಳಿಗೆ ಸಿಲುಕಿದ್ದ ಸಂಸಾರಗಳನ್ನು ಹಾಲು ಜೇನಿನಂತೆ ಮತ್ತೆ ಹೊಂದಾಣಿಕೆ ಮಾಡಿದರು.

ಇದು ಕಥೆಯಲ್ಲ ಜೀವನ ಎಂದು ನ್ಯಾಯಾಧೀಶರು ಮತ್ತು ವಕೀಲರು ಆ ಜೋಡಿಗಳಿಗೆ ಅರಿವಿನ ಜ್ಞಾನ ಮೂಡಿಸಿದರು. ಅಜ್ಞಾನದ ದಾರಿಯನ್ನು ತಪ್ಪಿಸಿ ಜೀವನದ ಪಯಣದತ್ತ ಸಾಗಲು ತಿಳಿಸಿದ ಕೊಪ್ಪಳ ಜಿಲ್ಲೆಯ ಎಲ್ಲಾ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ವಕೀಲರುಗಳ ಸಮ್ಮುಖದಲ್ಲಿ ನ್ಯಾಯಾಲಯಗಳಲ್ಲಿನ ಆವರಣದಲ್ಲಿ ಸಾರ್ವಜನಿಕರ ಎದುರಿನಲ್ಲಿ ಹೂವಿನ ಹಾರ ಬದಲಿಸಿಕೊಂಡು ಸಂಸಾರದ ಮತ್ತೊಂದು ಮಗ್ಗಲಿಗೆ 14 ಜೋಡಿಗಳು ಹೊಸ ಹೆಜ್ಜೆ ಹಾಕಿದರು.

3328 ಪ್ರಕರಣಗಳು ಇತ್ಯರ್ಥ : ಇದೆ ಸಂದರ್ಭದಲ್ಲಿ ವಿಮೆ, ನೀರಿನ ಬಿಲ್, ಬ್ಯಾಂಕ್ ಸಾಲ, ಮನೆ ಕರ, ಕೌಟುಂಬಿಕ ದೌರ್ಜನ್ಯ, ಜೀವನಾಂಶ, ಚೆಕ್ ಬೌನ್ಸ್ ಪ್ರಕರಣಗಳು, ಜನನ ಮರಣ, ಸಿವಿಲ್ ಕೇಸ್, ಕ್ರಿಮಿನಲ್ ಕೇಸ್, ಮೋಟಾರ್ ವಾಹನ ಅಪಘಾತ, ಎಂ. ಎಂ.ಆರ್.‌ಡಿ ಪ್ರಕರಣಗಳು ಹಾಗೂ ಇತ್ಯಾದಿ ಸೇರಿದಂತೆ ಕೊಪ್ಪಳ, ಗಂಗಾವತಿ, ಕುಷ್ಟಗಿ ಹಾಗೂ ಯಲಬುರ್ಗಾ ನ್ಯಾಯಾಲಯಗಳಲ್ಲಿ ಒಟ್ಟು 4182 ಪ್ರಕರಣಗಳ ಪೈಕಿ 3328 ಪ್ರಕರಣಗಳನ್ನು ಇತ್ಯರ್ಥ ಮಾಡಲಾಯಿತು.

ದಾಖಲೆಯ ಮೌಲ್ಯ : ವಿಮೆ, ನೀರಿನ ಬಿಲ್, ಮೋಟಾರ್ ವಾಹನ ಅಪಘಾತ ಸೇರಿದಂತೆ ವಿವಿಧ ಪ್ರಕರಣಗಳ ಇತ್ಯರ್ಥ ಮಾಡಲಾದ ಒಟ್ಟು ಮೌಲ್ಯ 55,38,75,322 ಆಗಿರುತ್ತದೆ. ಹಾಗೂ ಪೂರ್ವ ದಾವೇ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 35,403 ಪ್ರಕರಣಗಳ ಪೈಕಿ 32,393 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಇತ್ಯರ್ಥ ಪಡಿಸಲಾದ ಒಟ್ಟು ಮೌಲ್ಯ 2,40,85,455 ಇದ್ದು, ಒಟ್ಟಾರೆ ಒಂದೇ ದಿನದಲ್ಲಿ ಒಟ್ಟು 39,583 ಪ್ರಕರಣಗಳ ಪೈಕಿ 35,721 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಇತ್ಯರ್ಥಪಡಿಸಲಾದ ಒಟ್ಟು ಮೌಲ್ಯ 57,79,60,777 ಇರುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹೇಳಿದೆ.


Share It

You cannot copy content of this page