ನವೋದ್ಯಮಿಗಳಿಗೆ ಉದ್ಯಮಶೀಲತೆ ಮತ್ತು ನಾಯಕತ್ವ ಕುರಿತ ಕಾರ್ಯಾಗಾರ
ಬೆಂಗಳೂರು: ನಗರದ ಐಟಿ ಪಾಕ್೯ ರಸ್ತೆಯಲ್ಲಿರುವ ಸಿಎಂಆರ್ ತಾಂತ್ರಿಕ ಮಹಾವಿದ್ಯಾಲಯದ ಎಂಬಿಎ ವಿಭಾಗವು ಇತ್ತೀಚೆಗೆ ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳಿಗಾಗಿ ನವೋದ್ಯಮಿಗಳಿಗೆ ಉದ್ಯಮಶೀಲತೆ ಹಾಗೂ ನಾಯಕತ್ವ ಕುರಿತಂತೆ ಸಂಪನ್ಮೂಲ ವ್ಯಕ್ತಿಗಳ ಜೊತೆಗಿನ ಸಂವಹನ, ಸಂವಾದ ಕುರಿತು ಕಾರ್ಯಾಗಾರ ನಡೆಸಿತು.
ಸಿಎಂಆರ್ ತಾಂತ್ರಿಕ ಮಹಾವಿದ್ಯಾಲಯದ ಧ್ವನಿ ಸಭಾಂಗಣದಲ್ಲಿ ನಡೆದ ಟೆಡೆಕ್ಸ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ನಮ್ರತಾ ಕೌಶಿಕ್, ಸಿನಿಯರ್ ಪ್ರಾಜೆಕ್ಟ್ ಮ್ಯಾನೇಜರ್, ಶೆಲ್ ಇಂಡಿಯಾ ಮಾರ್ಕೆಟ್ ಪ್ರೈವೇಟ್ ಲಿಮಿಟೆಡ್ ಮತ್ತು ದರೂಲರ್ಸ್ ಸಿನಿಮಾ ನಿರ್ದೇಶಕ, ನಟ ಸಂದೇಶ್ ಅವರು ಭಾಗವಹಿಸಿದ್ದರು.
ಶೆಲ್ ಇಂಡಿಯಾ ಮಾರ್ಕೆಟ್ ಪ್ರೈವೇಟ್ ಲಿಮಿಟೆಡ್ ನ ಪ್ರಾಜೆಕ್ಟ್ ಮ್ಯಾನೇಜರ್ ನಮ್ರತಾ ಕೌಶಿಕ್ ಅವರು ಟೆಡೆಕ್ಸ್ ಕಾರ್ಯಾಗಾರವನ್ನು ಉದ್ಘಾಟಿಸಿದರು. ನಂತರ ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳೊಂದಿಗೆ ತಮ್ಮ ಉದ್ಯಮಶೀಲತೆಯ ಯಶೋಗಾಥೆ ಬಗ್ಗೆ ಸಂವಾದ ನಡೆಸಿದರು. ಇಂಜಿನಿಯರಿಂಗ್ ಪದವಿ ಪಡೆದು ಹಂತ ಹಂತವಾಗಿ ಶೆಲ್ ಇಂಡಿಯಾ ಮಾರ್ಕೆಟ್ ಪ್ರೈವೇಟ್ ಲಿ. ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವಲ್ಲಿನ ಯಶಸ್ಸಿನ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಮಾತನಾಡಿದರು.
ಯಶಸ್ವಿ ಉದ್ಯಮಶೀಲತೆಗೆ ಸ್ಪರ್ಧಾತ್ಮಕತೆ ಕಾರ್ಯಪ್ರಧಾನ ನಿರ್ವಹಣೆ, ಸಮಯ ಪ್ರಜ್ಞೆ, ನಾಯಕತ್ವ ಇವು ಬಹಳ ಮುಖ್ಯವಾಗಿರಬೇಕಾದ ಗುಣಗಳು. ಇವುಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಂಪನ್ಮೂಲ ವ್ಯಕ್ತಿಗಳಾಗಿ ದೇಶದ ಅಭಿವೃದ್ಧಿಗೆ ಕೈಜೋಡಿಸಿ ಎಂದು ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಿದರು.
ನಂತರ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿದ ದರೂಲರ್ಸ್ ಸಿನಿಮಾ ನಿರ್ದೇಶಕ ಹಾಗೂ ನಟ ಸಂದೇಶ ಅವರು ದರೂಲರ್ಸ್ ಸಿನಿಮಾ ಹುಟ್ಟಿದ ಕಥೆ ಹಾಗೂ ಸಿನಿಮಾ ಯಶಸ್ಸಿನ ಬಗ್ಗೆ ಮಾತನಾಡಿದರು. ಕೋಲಾರ ಜಿಲ್ಲೆಯಲ್ಲಿ ನಡೆದ ಒಂದು ನೈಜ ಘಟನೆ ನನಗೆ ದರೂಲರ್ಸ್ ಸಿನಿಮಾ ಮಾಡಲು ಪ್ರೇರಣೆಯಾಯಿತು. ದರೂಲರ್ಸ್ ಸಿನಿಮಾದ ಕಥಾವಸ್ತು ಇಂದಿನ ವಾಸ್ತವ ಸಮಾಜದ ನೈಜ ಘಟನೆಯನ್ನು ಅನಾವರಣ ಮಾಡುತ್ತಲೆ, ಸಾಮಾಜಿಕ ನ್ಯಾಯವನ್ನು, ಸಮಸಮಾಜದ ಆಶಯವನ್ನು ಬಿತ್ತುತ್ತದೆ ಎಂದು ಹೇಳಿದರು.
ಸಾಮಾನ್ಯ ಒಬ್ಬ ನಟನಾಗಿ ಸಿನಿಮಾ ರಂಗಕ್ಕೆ ಬಂದು ಯಶಸ್ವಿ ನಿರ್ದೇಶಕನಾಗಿ ಬೆಳೆದು ನಿಂತ ಯಶಸ್ಸಿನ ಬಗ್ಗೆ ವಿದ್ಯಾರ್ಥಿಗಳಿಗೆ ಹೇಳಿದ ಸಂದೇಶ ಅವರು, ಸಿನಿಮಾ ಮಾಧ್ಯಮದ ಸಾಮಜಿಕ ಹೊಣೆಗಾರಿಕೆಯ ಜೊತೆಗೆ ಉದ್ಯಮಿಗಳಾಗಿ,ನಟರಾಗಿ,ನಿರ್ದೇಶಕರಾಗಿ,ತಂತ್ರಜ್ಞರಾಗಿ ಸಿನಿಮಾ ಕ್ಷೇತ್ರದ ವೃತ್ತಿಪರತೆ ಮತ್ತು ಉದ್ಯಮಶೀಲತೆಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ಟೆಡೆಕ್ಸ್ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಉದ್ಯಮಿ ನಮ್ರತಾ ಕೌಶಿಕ್ ಮತ್ತು ನಿರ್ದೇಶಕ ಸಂದೇಶ ಅವರಿಗೆ ಎಂಬಿಎ ವಿಭಾಗದ ಮುಖ್ಯಸ್ಥರಾದ ಡಾ.ಸಂದೀಪ್ ಕುಮಾರ್.ಎಂ ಅವರು ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಎಂಬಿಎ ವಿಭಾಗದ ಎಲ್ಲಾ ಪ್ರಾಧ್ಯಾಪಕರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.