ಬೆಂಗಳೂರು: ಚುನಾವಣಾ ಬಾಂಡ್‌ಗಳ ಮೂಲಕ
ಬಹುಕೋಟಿ ದೇಣಿಗೆ ಪಡೆಯಲು ಜಾರಿ ನಿರ್ದೇಶನಾಲಯ ದುರ್ಬಳಕೆ ಮಾಡಿಕೊಂಡ ಆರೋಪದಡಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಬಿಜೆಪಿಯ ರಾಷ್ಟ್ರೀಯ ಪದಾಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ತಿಲಕ್ ನಗರ ಪೊಲೀಸರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶದ ಬೆನ್ನಲ್ಲೇ ಪ್ರಕರಣದ ಕುರಿತ ತನಿಖೆಗೆ ಹಿರಿಯ ಐಪಿಎಸ್ ಅಧಿಕಾರಿ ಮಟ್ಟದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲು ಅಥವಾ ಸಿಐಡಿ ತನಿಖೆಗೆ ವಹಿಸಲು ಸರ್ಕಾರ ಮುಂದಾಗಿದೆ. ಈ ಬಗ್ಗೆ ಸೋಮವಾರ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆಯಿದೆ. ಬೃಹತ್ ಆರ್ಥಿಕ ಹಗರಣವಾಗಿರುವ ಕಾರಣ ಪೊಲೀಸ್ ಠಾಣೆ ಮಟ್ಟದಲ್ಲಿ ತನಿಖೆ ಅಸಾಧ್ಯವಾಗಿದೆ.
ಈ ಪ್ರಕರಣದಲ್ಲಿ ಆರೋಪಿಗಳಾಗಿ ಎ1 ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್, ಎ2 ಜಾರಿ ನಿರ್ದೇಶನಾಲಯ, ಎ3 ಕೇಂದ್ರ ಬಿಜೆಪಿ ಕಚೇರಿ ಸಿಬ್ಬಂದಿ, ಎ4 ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ನಳಿನ್ ಕುಮಾರ್‌ಕಟೀಲ್, ಎ5 ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಹಾಗೂ ರಾಜ್ಯ ಬಿಜೆಪಿ ಕಚೇರಿ ಸಿಬ್ಬಂದಿ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.