ಬೆಂಗಳೂರು: ಒಂದಲ್ಲ ಒಂದು ಕಾರಣಕ್ಕೆ ಬಿಎಂಟಿಸಿ ನಿರ್ವಾಹಕ ಮತ್ತು ಚಾಲಕರ ಮೇಲೆ ಪ್ರಯಾಣಿಕರಿಂದ ಹಲ್ಲೆಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸಿಬ್ಬಂದಿ ರಕ್ಷಣೆಗಾಗಿ ಗನ್ ಪರವಾನಗಿ ಪಡೆಯಲು ಅನುಮತಿ ನೀಡುವಂತೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ನಿರ್ವಾಹಕರೊಬ್ಬರು ಪತ್ರ ಬರೆದಿದ್ದಾರೆ.
ಬಸ್ ನ ಬಾಗಿಲ ಬಳಿ ನಿಲ್ಲಬೇಡ ಎಂದಿದ್ದಕ್ಕೆ ಪ್ರಯಾಣಿಕನೊಬ್ಬ ಐಟಿಪಿಎಲ್ ಬಸ್ ನಿಲ್ದಾಣದಲ್ಲಿ ಬಿಎಂಟಿಸಿ ವೋಲ್ಲೋ ಬಸ್ ನಿರ್ವಾಹಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ. ಹಲ್ಲೆಗೊಳಗಾಗಿರುವ ನಿರ್ವಾಹಕ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ರೀತಿಯ ಹಲ್ಲೆ ಪ್ರಕರಣಗಳು ಪದೇ ಪದೇ ಮರುಕಳಿಸುತ್ತಿವೆ. ಈ ಕಾರಣದಿಂದ ನಿರ್ವಾಕರು ಮತ್ತು ಚಾಲಕರು ಮಾನಸಿಕವಾಗಿ ಕುಗ್ಗಿ ಹೋಗಿದ್ದು ಕರ್ತವ್ಯ ನಿರ್ವಹಿಸುವುದೇ ಕಷ್ಟವಾಗಿದೆ. ಹೀಗಾಗಿ ಬಿಎಂಟಿಸಿ ಚಾಲಕ ಮತ್ತು ನಿರ್ವಾಹಕರು ಜೀವ ರಕ್ಷಣೆಗಾಗಿ ಗನ್ ಲೈಸೆನ್ಸ್ ಪಡೆಯಲು ಅನುಮತಿ ನೀಡುವಂತೆ ಯೋಗೀಶ್ ಗೌಡ ಎಂಬ ಸಿಬ್ಬಂದಿ ಪತ್ರದ ಮುಖೇನ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಕೋರಿದ್ದಾರೆ.