ಸುದ್ದಿ

ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ನೌಕರಿ: ತನಿಖೆಗೆ ಹೈಕೋರ್ಟ್ ಆದೇಶ

Share It

ಬೆಂಗಳೂರು: ಹಿಂದುಳಿದ ವರ್ಗಕ್ಕೆ ಸೇರಿದ ಕಲಬುರಗಿಯ ವ್ಯಕ್ತಿಯೊಬ್ಬರು ಎಸ್‌ಟಿ ಸಮುದಾಯದ ಕೋಲಿ ಧೋರ್ ಜಾತಿ ಹೆಸರಿನಲ್ಲಿ ಸುಳ್ಳು ಪ್ರಮಾಣಪತ್ರ ಪಡೆದು, ಅದರ ಲಾಭ ಪಡೆದಿರುವ ಬಗ್ಗೆ ತನಿಖೆ ನಡೆಸಲು ಹೈಕೋರ್ಟ್ ಆದೇಶಿಸಿದೆ. ಇದೇ ವೇಳೆ ನಕಲಿ ಜಾತಿ ಪ್ರಮಾಣಪತ್ರದ ಪ್ರಯೋಜನದಿಂದ ಬಿಎಸ್ ಎನ್‌ಎಲ್‌ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡ ಆರೋಪದ ಮೇಲೆ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಪಡಿಸುವಂತೆ ಕೋರಿ ಶ್ರೀಮಂತ್ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ.

ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರ ಪೀಠ ಈ ಆದೇಶ ಮಾಡಿದೆ. ದಾಖಲೆಗಳನ್ನು ಪರಿಶೀಲಿಸಿದರೆ, ಅರ್ಜಿದಾರರು ಹಿಂದುಳಿದ ಕಬ್ಬಲಿಗ ಜಾತಿಗೆ ಸೇರಿದವರಾಗಿದ್ದಾರೆ. ಅವರು ಸುಳ್ಳು ಮಾಹಿತಿ ನೀಡಿ 1978ರಲ್ಲಿ ಬಿಎಸ್ ಎನ್‌ಎಲ್ ನಿಂದ ಉದ್ಯೋಗ ಪಡೆದು ಅದರ ಲಾಭ ಮಾಡಿಕೊಂಡಿದ್ದಾರೆ.

ನಂತರ ಜಿಲ್ಲಾ ಜಾತಿ ಪ್ರಮಾಣ ಪತ್ರ ಪರಿಶೀಲನಾ ಸಮಿತಿಯು ಪ್ರಮಾಣಪತ್ರವನ್ನು ರದ್ದುಗೊಳಿಸಿದೆ. ಹಾಗಾಗಿ ಪ್ರಕರಣದ ಬಗ್ಗೆ ತನಿಖೆ ಆಗಬೇಕಿದೆ. ರಾಜ್ಯ ಸರ್ಕಾರವನ್ನು ವಂಚಿಸಿರುವ ಹಾಗೂ ಎಸ್‌ಟಿ ಸಮುದಾಯಕ್ಕೆ ಸೇರಿದವರ ಹಕ್ಕು ಕಸಿದುಕೊಂಡಿರುವ ಅರ್ಜಿದಾರರ ವಿರುದ್ಧ ವಿಚಾರಣಾ ಪ್ರಕ್ರಿಯೆ ನಡೆಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.


Share It

You cannot copy content of this page