ಬೆಂಗಳೂರು: ಭಾಗಶ: ಅಂಗಹೀನತೆಯಿಂದ ಬಳಲುತ್ತಿರುವ ಪತಿ ಜೀವನಾಂಶ ಪಾವತಿಸುವಂತೆ ವಿಚ್ಛೇದಿತ ಪತ್ನಿ ಸಲ್ಲಿಸಿರುವ ಅರ್ಜಿಯನ್ನು ಮಾನ್ಯ ಮಾಡಲಾಗದು ಎಂದಿರುವ ಹೈಕೋರ್ಟ್ ಈ ಪ್ರಕರಣ ಸಂಬಂಧ ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿದೆ.
ವಿಚ್ಛೇದನ ಕುರಿತಾಗಿ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸುವಂತೆ ಪತಿ ಸಲ್ಲಿಸಿದ ಹಾಗೂ ಜೀವನಾಂಶ ಮೊತ್ತವನ್ನು ಹೆಚ್ಚಿಸುವಂತೆ ಕೋರಿ ಪತ್ನಿಯೂ ಸಲ್ಲಿಸಿದ ಪ್ರತ್ಯೇಕ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ವಿಚಾರಣೆ ನಡೆಸಿತು.
ಪತಿ ಶೇ.75% ಅಂಗಹೀನತೆ ಹೊಂದಿದ್ದು ಊರುಗೋಲಿನ ಸಹಾಯದಿಂದ ನಡೆಯುತ್ತಿದ್ದು ಆತ ಉದ್ಯೋಗವನ್ನು ಹುಡುಕಲು ಅಸಹಾಯಕನಾಗಿದ್ದಾನೆ. ಹೀಗಾಗಿ ಆತನಿಗೆ ಜೀವನಾಂಶವನ್ನು ನೀಡುವಂತೆ ನಿರ್ದೇಶಿಸಲಾಗದು ಎಂದು ನ್ಯಾಯಪೀಠ ಹೇಳಿದೆ.
ಪತಿಯ ಅಂಗವೈಕಲ್ಯ ಪ್ರಮಾಣಪತ್ರವನ್ನು ಉಲ್ಲೇಖಿಸಿದ ನ್ಯಾಯಪೀಠ, ಪತ್ನಿ ಸಂಪಾದನೆಗೆ ಅರ್ಹಳಾಗಿದ್ದರೂ ಗಂಡನ ಪರಿಸ್ಥಿತಿ ನೋಡಿಕೊಂಡು ಜೀವನಾಂಶ ಪಾವತಿಸುವಂತೆ ಒತ್ತಾಯಿಸುವುದು ಸಮಂಜಸವಲ್ಲ ಎಂದ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು. 2013ರ ಡಿಸೆಂಬರ್ ನಲ್ಲಿ ಪತಿ ತೀವ್ರ ಅನಾರೋಗ್ಯಕ್ಕೆ ತುತ್ತಾದರು. ಅನಾರೋಗ್ಯದ ಅವಧಿಯನ್ನು ಒಳಗೊಂಡು 19 ಲಕ್ಷ ರೂ. ಜೀವನಾಂಶ ನೀಡಲು ಬಾಕಿ ಇದೆ ಎಂದು ಅರ್ಜಿಯಲ್ಲಿ ಕೋರಲಾಗಿದೆ. ಇದನ್ನು ಪಾವತಿಸಲು ನಿರ್ದೇಶಿಸಿದರೆ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯನ್ನು ಇನ್ನಷ್ಟು ಚಿಂತೆಗೆ ದೂಡಿದಂತಾಗುತ್ತದೆ ಎಂದು ಕೋಟ್೯ ಅಭಿಪ್ರಾಯಪಟ್ಟಿದ್ದು, ವಿಚ್ಛೇದಿತ ಪತಿ ತಂದೆ ಆಸ್ತಿಯನ್ನು ಹೊಂದಿದ್ದು ಜೀವನಾಂಶ ಪಾವತಿಸಲು ಸಮರ್ಥರಾಗಿದ್ದಾರೆ ಎಂಬ ಪತ್ನಿಯ ವಾದವನ್ನು ನ್ಯಾಯಾಲಯ ತಿರಸ್ಕರಿಸಿದೆ.