ನವದೆಹಲಿ: ಅನಧಿಕೃತವಾಗಿ ಉ.ಪ್ರದೇಶದಲ್ಲಿ ಅಧಿಕಾರಿಗಳಿಂದ ರಾತ್ರೋರಾತ್ರಿ ಮನೆ ಧ್ವಂಸ ಮಾಡಿದ ಪ್ರಕರಣ ಸಂಬಂಧಿಸಿದಂತೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸುಪ್ರೀಂಕೋರ್ಟ್, ಯಾವ ರಾಜ್ಯಗಳೂ ಏಕಾಏಕಿ ಬುಲ್ಡೋಜರ್ ಬಳಸಿ ಮನೆ ಧ್ವಂಸ ಮಾಡುವಂತಿಲ್ಲ ಎಂದು ಆದೇಶ ಮಾಡಿದೆ.
ಸಾರ್ವಜನಿಕ ರಸ್ತೆ ಅಗಲೀಕರಣಕ್ಕಾಗಿ ವ್ಯಕ್ತಿಯೊಬ್ಬರ ಮನೆಯನ್ನು 2019ರಲ್ಲಿ ಧ್ವಂಸ ಮಾಡಿದ ಉತ್ತರ ಪ್ರದೇಶ ಅಧಿಕಾರಿಗಳ ನಡೆಯನ್ನು ತೀವ್ರವಾಗಿ ಖಂಡಿಸಿರುವ ನ್ಯಾಯಾಲಯ ಮನೆ ಕಳೆದುಕೊಂಡ ವ್ಯಕ್ತಿಗೆ ₹25 ಲಕ್ಷ ಪರಿಹಾರ ನೀಡುವಂತೆ ಸೂಚಿಸಿದೆ.
ಅಲ್ಲದೆ,ರಾತ್ರೋರಾತ್ರಿ ಬುಲ್ಡೋಜರ್ ಬಳಸಿ ಮನೆ ಧ್ವಂಸಾಡುವಂತಿಲ್ಲ ಎಂದು ಎಲ್ಲಾ ರಾಜ್ಯಗಳಿಗೂ ಎಚ್ಚರಿಕೆ ನೀಡಿದೆ.
ಮನೆ ಧ್ವಂಸ ಮಾಡಿದ್ದನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ಜೆ.ಬಿ.ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರುಗಳ ಪೀಠ ಮನೆ ಧ್ವಂಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ನಡೆಯನ್ನು ತೀವ್ರವಾಗಿ ಪ್ರಶ್ನಿಸಿದೆ.
ನೋಟೀಸ್ ನೀಡದೆ ರಾತ್ರೋರಾತ್ರಿ ಬಂದು ವಾಸವಿರುವ ಮನೆಯನ್ನು ಬುಲ್ಡೋಜರ್ ಬಳಸಿ ಧ್ವಂಸ ಮಾಡಿದರೆ ಆ ಕುಟುಂಬಗಳು ಎಲ್ಲಿಗೆ ಹೋಗಬೇಕು? ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವ ಪೀಠ, ಉ.ಪ್ರದೇಶದ ಮಹಾರಾಜಗಂಜ್ ಜಿಲ್ಲೆಯಲ್ಲಿ ನಡೆದಿರುವ ಅನಧಿಕೃತವಾಗಿ ಮನೆ ಧ್ವಂಸಗೊಳಿಸಿದವರ ವಿರುದ್ಧ ತನಿಖೆ ನಡೆಸಿ ವರದಿ ನೀಡುವಂತೆ ಯುಪಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ತಿಳಿಸಿದೆ.