ಬೆಂಗಳೂರು: ಪರ ಪುರುಷನೊಂದಿಗೆ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಅಸಮಾಧಾನಗೊಂಡು ಪತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ನಿಖರ ಸಾಕ್ಷ್ಯಗಳ ಕೊರತೆ ಕಾರಣ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಪತ್ನಿಯನ್ನು ಶಿಕ್ಷಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್ ಅಧೀನ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದೆ.
ಶಿಕ್ಷೆ ವಿಧಿಸಿದ ಅಧೀನ ನ್ಯಾಯಾಲಯದ ಆದೇಶ ರದ್ದುಪಡಿಸುವಂತೆ ಕೋರಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ನಿವಾಸಿ ಪ್ರೇಮಾ ಮತ್ತು ಆಕೆಯೊಂದಿಗೆ ಗೆಳೆತನ ಹೊಂದಿದ್ದ ಬಸವಲಿಂಗೇಗೌಡ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣನವರ್ ಅವರ ಪೀಠ ಈ ಆದೇಶ ಮಾಡಿದೆ.
ಮೃತನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದನೆ ನೀಡುವುದನ್ನು ತೋರಿಸಲು ಅರ್ಜಿದಾರ ಆರೋಪಿಗಳು ನಿರ್ದಿಷ್ಟ ನಡೆ ಪ್ರದರ್ಶಿಸಿರುವುದಕ್ಕೆ ನಿಖರ ಸಾಕ್ಷ್ಯಗಳು ಇರಬೇಕಾಗುತ್ತದೆ. ಇಲ್ಲವಾದರೆ, ಆತ್ಮಹತ್ಯೆಗೆ ಪ್ರಚೋದನೆ ಅಪರಾಧವನ್ನು ಸಾಬೀತುಪಡಿಸಲು
ಸಾಧ್ಯವಿಲ್ಲ. ಅದರಂತೆ ಪ್ರಕರಣದಲ್ಲಿ ಆರೋಪಿಗಳನ್ನು ಶಿಕ್ಷಿಸಲಾಗದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಅಲ್ಲದೆ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅಪರಾಧದಡಿ ಪ್ರೇಮಾ ಮತ್ತು ಬಸವಲಿಂಗೇಗೌಡ ಅವರನ್ನು ಅಪರಾಧಿಗಳು ಎಂದು ತೀರ್ಮಾನಿಸಿ ಇಬ್ಬರಿಗೆ ಮೂರು ಮತ್ತು ನಾಲ್ಕು ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದ್ದ ಅಧೀನ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದೆ.