ಬೆಂಗಳೂರು: ಪತ್ನಿ ಹಾಗೂ ವಿಕಲ ಚೇತನ ಮಗನಿಗೆ ಜೀವನಾಂಶ ನೀಡದ ಪತಿಯ ನಡವಳಿಕೆಗೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್ ಪತ್ನಿಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿಸಿದೆ.
ಜೀವನಾಂಶಕ್ಕೆ ಸಂಬಂಧಿಸಿದಂತೆ ಮಹಿಳೆ ಹಾಗೂ ಆಕೆಯ ಪುತ್ರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಅನು ಶಿವರಾಮನ್ ಹಾಗೂ ನ್ಯಾ. ಅನಂತ್ ರಾಮನಾಥ್ ಹೆಗಡೆ ಅವರಿದ್ದ ವಿಭಾಗೀಯ ಪೀಠ ಈ ಮಹತ್ವದ ತೀರ್ಪು ನೀಡಿದೆ.
ಹೈಕೋರ್ಟ್ ತನ್ನ ತೀರ್ಪಿನಲ್ಲಿ, ಕೌಟುಂಬಿಕ ನ್ಯಾಯಾಲಯ ಪತ್ನಿ ಹಾಗೂ ಮಗನಿಗೆ ಜೀವನಾಂಶ ನೀಡುವಂತೆ ಪತಿಗೆ ಆದೇಶಿಸಿದೆ. ಆದರೆ, ಪತಿ ಜೀವನಾಂಶ ನೀಡುವ ಹೊಣೆಯನ್ನು ನಿಭಾಯಿಸಿಲ್ಲ. 1982ರ ಆಸ್ತಿ ವರ್ಗಾವಣೆ ಕಾಯ್ದೆಯ ಸೆಕ್ಷನ್ 39ರ ಪ್ರಕಾರ ಜೀವನಾಂಶದ ಬಾಕಿಯನ್ನು ಆಸ್ತಿ ಮೇಲಿನ ಶುಲ್ಕವಾಗಿ ಪರಿಗಣಿಸಲು ಅವಕಾಶವಿದೆ. ಹೀಗಾಗಿ ಆಸ್ತಿ ಮುಟ್ಟುಗೋಲಿಗೆ ಆದೇಶಿಸಬಹುದು ಎಂದು ಅಭಿಪ್ರಾಯಪಟ್ಟಿದೆ.
ಅಲ್ಲದೇ, ಪತಿಗೆ ಸೇರಿರುವ ಬೆಂಗಳೂರಿನ ಉತ್ತರಹಳ್ಳಿಯ 1276 ಚದರಡಿ ಮನೆಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಪತಿಗೆ ಸೇರಿರುವ ಇತರೆ ಆಸ್ತಿಗಳ ವಿವರವನ್ನು ಪತ್ನಿ ನೀಡಿದರೆ ಅವುಗಳ ಮೇಲೂ ಇದೇ ಕ್ರಮ ಜರುಗಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಹಾಗೆಯೇ, ಆಸ್ತಿಗೆ ಸಂಬಂಧಪಟ್ಟ ಪ್ರಾಧಿಕಾರಗಳು (ಸಬ್ ರಿಜಿಸ್ಟ್ರಾರ್ ಮತ್ತು ಬಿಬಿಎಂಪಿ) ಅದರ ದಾಖಲೆಗಳಲ್ಲಿ ಆಸ್ತಿ ಮುಟ್ಟುಗೋಲು ಕುರಿತ ವಿವರಗಳನ್ನು ದಾಖಲಿಸುವಂತೆ ನಿರ್ದೇಶಿಸಿದೆ.
ಇನ್ನು ಪತ್ನಿಗೆ ನೀಡುತ್ತಿದ್ದ ಮಾಸಿಕ 2 ಸಾವಿರ ರೂಪಾಯಿ ಹಾಗೂ ಮಗನಿಗೆ ನೀಡುತ್ತಿದ್ದ ಮಾಸಿಕ 1 ಸಾವಿರ ರೂಪಾಯಿ ಜೀವನಾಂಶವನ್ನು ತಲಾ 5000 ರೂಪಾಯಿಗೆ ಏರಿಕೆ ಮಾಡಿರುವ ಹೈಕೋರ್ಟ್, ಈ ಮೊತ್ತವನ್ನು ಪತ್ನಿ ಜೀವನಾಂಶ ಹೆಚ್ಚಳ ಕೋರಿ ಅರ್ಜಿ ಸಲ್ಲಿಸಿರುವ 2012ರ ಏಪ್ರಿಲ್ ನಿಂದ ಅನ್ವಯವಾಗುವಂತೆ ಪಾವತಿಸಬೇಕೆಂದು ಹೈಕೋರ್ಟ್ ತೀರ್ಪು ನೀಡಿದೆ.
ಪ್ರಕರಣದ ಹಿನ್ನೆಲೆ: 2002ರಲ್ಲಿ ಪತಿ ಮನೆಯಿಂದ ದೂರವಾಗಿದ್ದ ಮಹಿಳೆ, ತನಗೆ ಮತ್ತು ಮಗನಿಗೆ ಜೀವನಾಂಶ ನೀಡುವಂತೆ ಕೋರಿದ್ದರು. ಈ ವೇಳೆ ನ್ಯಾಯಾಲಯ ಪತ್ನಿ ಮತ್ತು ಮಗನಿಗೆ ಕ್ರಮವಾಗಿ 2000 ಮತ್ತು 1000 ರೂಪಾಯಿಗಳನ್ನು ಮಾಸಿಕ ಜೀವನಾಂಶವಾಗಿ ನೀಡಲು ಆದೇಶಿಸಿತ್ತು. ಹತ್ತು ವರ್ಷಗಳ ಬಳಿಕ ಮಹಿಳೆ ಜೀವನಾಂಶ ಹೆಚ್ಚಿಸಲು ಕೋರಿ ಅರ್ಜಿ ಸಲ್ಲಿಸಿದ್ದರು. 2018ರ ಸೆಪ್ಟೆಂಬರ್ ನಲ್ಲಿ ಕೌಟುಂಬಿಕ ನ್ಯಾಯಾಲಯ ತಾಯಿ-ಮಗನಿಗೆ ತಲಾ 3000 ರೂಪಾಯಿಗಳನ್ನು ಪಾವತಿಸುವಂತೆ ಪತಿಗೆ ನಿರ್ದೇಶನ ನೀಡಿತ್ತು.
ವಿಶೇಷಚೇತನನಾಗಿರುವ ಮಗನ ನಿರ್ವಹಣೆಗೆ ಈ ಮೊತ್ತ ಸಾಕಾಗುವುದಿಲ್ಲ ಹಾಗೂ ಪತಿ ಈವರೆಗೆ ಸಾಕಷ್ಟು ಹಿಂಬಾಕಿ ಉಳಿಸಿಕೊಂಡಿದ್ದು ಜೀವನ ಕಷ್ಟಕರವಾಗಿದೆ ಎಂದು ಮಹಿಳೆ ಹಾಗೂ ಆಕೆಯ ಪುತ್ರ ಹೈಕೋರ್ಟ್ ಮೊರೆ ಹೋಗಿದ್ದರು. ಜತೆಗೆ ಪತಿ ಕೆಲ ಸ್ಥಿರಾಸ್ತಿಗಳನ್ನು ಮಾರಾಟ ಮಾಡಿದ್ದರೂ ತಮಗೆ ಜೀವನಾಂಶ ನೀಡಿಲ್ಲ. ಹೀಗಾಗಿ ಆತನಿಗೆ ಸೇರಿರುವ ಆಸ್ತಿ ಮುಟ್ಟುಗೋಲಿಗೆ ಆದೇಶಿಸಬೇಕು ಎಂದು ಕೋರಿದ್ದರು.
(ಸುದ್ದಿಮೂಲ:- ಲಾಟೈಮ್)