ಸುದ್ದಿ

ರಾಜಕೀಯ ದಂಗಲ್:ಹೊಸ ಇತಿಹಾಸಕ್ಕೆ ಸಾಕ್ಷಿಯಾಗಲಿದ್ಯಾ ಚನ್ನಪಟ್ಟಣ..!?

Share It

ಹೆಚ್.ಡಿ ಕುಮಾರಸ್ವಾಮಿ ಕೇಂದ್ರ ಸಚಿವರಾಗ್ತಿದ್ದಾಗೆ ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಚನ್ನಪಟ್ಟಣ ರಾಜ್ಯ ರಾಜಕಾರಣದಲ್ಲಿ ಅತಿ ಹೆಚ್ಚಾಗಿ ಸೌಂಡು ಮಾಡುತ್ತಿದೆ. ಕುಮಾರಸ್ವಾಮಿ ಅವರಿಂದಾಗಿ ತೆರವಾಗಿರುವ ಕ್ಷೇತ್ರವನ್ನ ಸುಪರ್ದಿಗೆ ಪಡೆಯೋಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಅತಿ ಹೆಚ್ಚು ಉತ್ಸುಕರಾಗಿರೋದು ಮಾತ್ರವಲ್ಲ ಕಳೆದ ಲೋಕಸಭಾ ಚುನಾವಣೆಯಲ್ಲಿ ಸಹೋದರ ಡಿ.ಕೆ.ಸುರೇಶ್‌ಗೆ ಆದ ಸೋಲಿನ ಸೇಡು ತೀರಿಸಿಕೊಳ್ಳೋಕೆ ಕಾತುರರಾಗಿದ್ದಾರೆ. ಹಾಗಾಗಿ ಈ ಬಾರಿ ಇದೇ ಚನ್ನಪಟ್ಟಣವನ್ನು ಕಬ್ಜಾ ಮಾಡಿಕೊಳ್ಳೋಕೆ ಡಿಕೆಶಿ ರಣತಂತ್ರ ಮಾಡುತ್ತಿದ್ದು ಇದಾಗಲೇ ಕುಮಾರಸ್ವಾಮಿಗೆ ಬಹಿರಂಗವಾಗಿಯೇ ಸವಾಲು ಹಾಕಿದ್ದಾರೆ. ಈ ಇಬ್ಬರು ಮಹಾನಾಯಕರ ಜಿದ್ದಾಜಿದ್ದಿಯಲ್ಲಿ ಬಿಜೆಪಿಯ ಸಿ.ಪಿ.ಯೋಗೇಶ್ವರ್ ರಾಜಕೀಯ ಭವಿಷ್ಯ ಅತಂತ್ರವಾಗುತ್ತಿದೆ. ಹೀಗೆ ಮೂವರು ನಾಯಕರ ರಾಜಕೀಯ ದಂಗಲ್‌ನಲ್ಲಿ ಚನ್ನಪಟ್ಟಣ ಹಿಂದೆಂದೂ ಕಾಣಲಾರದ ಇತಿಹಾಸಕ್ಕೆ ಸಾಕ್ಷಿಯಾಗುತ್ತಿದೆ.

ಆ ಇತಿಹಾಸ ಏನು ಅಂತ ಹೇಳೋಕು ಮುನ್ನ ಚನ್ನಪಟ್ಟಣದಲ್ಲಿ ಏನಾಗುತ್ತಿದೆ ಅನ್ನೋದನ್ನ ಸವಿವರವಾಗಿ ಹೇಳಿಬಿಡ್ತೀವಿ ಕೇಳಿ. ಕುಮಾರಸ್ವಾಮಿ ಅವರಿಂದ ತೆರವಾಗಿರುವ ಶಾಸಕ ಸ್ಥಾನಕ್ಕೆ ಸದ್ಯದಲ್ಲೇ ಉಪ ಚುನಾವಣೆ ನಡೆಯಲಿದೆ. ಈ ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಎದುರಾಳಿಯಾಗಿ ಯಾರನ್ನು ಅಖಾಡಕ್ಕೆ ಇಳಿಸಬೇಕು ಅನ್ನೋ ಚರ್ಚೆ ಜೋರಾಗಿದೆ. ಒಂದು ಕಡೆ ಜೆಡಿಎಸ್ ತನ್ನ ಭದ್ರಕೋಟೆಯಾಗಿರೋ ಚನ್ನಪಟ್ಟಣವನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡಬಾರದೆಂಬ ನಿಲುವು ಹೊಂದಿದ್ದರೆ ಮತ್ತೊಂದು ಕಡೆ ಕುಮಾರಸ್ವಾಮಿ ಪುತ್ರ ನಿಖಿಲ್‌ನ ಚುನಾವಣೆಗೆ ನಿಲ್ಲಿಸಿ ಕ್ಷೇತ್ರವನ್ನ ಯಾಕೆ ಉಳಿಸಿಕೊಳ್ಳಬಾರದು ಅನ್ನೋ ಯೋಚನೆಯಲ್ಲಿದ್ದಾರೆ. ಆದ್ರೆ ಕಳೆದ ನಾಲ್ಕು ತಿಂಗಳ ಹಿಂದೆ ಉಂಟಾದ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದ ಯೋಗೇಶ್ವರ್ ಕುಮಾರಸ್ವಾಮಿ ಜೊತೆ ಕೈಗೂಡಿಸಿ ಅವರ ಗೆಲುವಿಗೆ ಸಾಥ್ ನೀಡಿದರೆ, ಅಣ್ಣ ರಾಷ್ಟ್ರ ರಾಜಕಾರಣಕ್ಕೆ ಹೋಗ್ತಾರೆ. ಬಳಿಕ ಚನ್ನಪಟ್ಟಣ ನಂದೇ ಎಂಬುದಾಗಿ ಕನಸು ಕಂಡಿದ್ದರು. ಇದೇ ಕಾರಣಕ್ಕೆ ಮೈತ್ರಿ ಕುದುರಲಿ ಅಂತ ಜೆಡಿಎಸ್‌ಗಿಂತ ಹೆಚ್ಚಾಗಿ ಯೋಗೇಶ್ವರ್ ಬಯಸಿದ್ದರು. ಈಗ ನೋಡಿದ್ರೆ ‘ನನ್ನಿಂದಲೇ ಜೆಡಿಎಸ್-ಬಿಜೆಪಿ ಮೈತ್ರಿ ಕುದುರಿದ್ದು. ಕುಮಾರಸ್ವಾಮಿ ನನ್ನಿಂದಲೇ ಸಚಿವರಾಗಿದ್ದು’ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಅಲ್ಲದೇ ‘ಒಂದು ವೇಳೆ ನಾನು ಕುಮಾರಸ್ವಾಮಿ ಜೊತೆ ಕೈಜೋಡಿಸದೇ ಹೋಗಿದ್ರೆ ಹಾಸನದಲ್ಲಿ ಜೆಡಿಎಸ್ ಮಾನ ಬೀದಿಗೆ ಬಿದ್ದಂತೆ ಇಲ್ಲೂ ಆಗ್ತಿತ್ತು’ ಅಂತ ಪರೋಕ್ಷವಾಗಿಯೇ ಹೆಚ್‌ಡಿಕೆ ಟಾಂಗ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲ ಹೈಕಮಾಂಡ್ ಬಳಿ ಈ ಬಾರಿ ತನಗೇ ಟಿಕೆಟ್ ಬೇಕು ಎಂದೂ ಪಟ್ಟು ಹಿಡಿದು ಕೂತಿದ್ದಾರೆ. ಆದ್ರೆ ಕುಮಾರಸ್ವಾಮಿಯ ನಿಲುವಿಗೆ ಬಿಜೆಪಿ ಕಾದು ಕೂತಿದೆ. ಒಂದು ವೇಳೆ ಟಿಕೆಟ್ ಮಿಸ್ ಆದ್ರೆ ಪಕ್ಷೇತರನಾಗಿ ನಿಂತು ಸ್ಪರ್ಧಿಸೋಕೂ ರೆಡಿ ಎಂದು ಯೋಗೇಶ್ವರ್ ಹೈಕಮಾಂಡ್‌ಗೇ ಸಂದೇಶ ರವಾನಿಸಿದ್ದಾರೆ.

ಇದೆಲ್ಲದರ ನಡುವೆ ಕುಮಾರಸ್ವಾಮಿ ಬೇರೆಯದ್ದೇ ತಂತ್ರ ಹೆಣೆಯುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯ ‘ಬೆಂಗಳೂರು ಗ್ರಾಮಾಂತರದ ಮಾಡೆಲ್’ ಮುಂದಿಟ್ಟು ಯೋಗೇಶ್ವರ್ ಯಾಕೆ ನಮ್ಮ ಪಕ್ಷದ ಚಿಹ್ನೆಯಡಿ ನಿಂತು ಗೆಲ್ಲಬಾರದು ಅಂತ ಪ್ರಶ್ನೆ ಮುಂದಿಟ್ಟಿದ್ದಾರಂತೆ. ಸದ್ಯ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿರುವ ಹೈಕಮಾಂಡ್ ನಾಯಕರು ಈ ಬಗ್ಗೆ ಇನ್ನೂ ಏನೂ ಯೋಚಿಸಿಲ್ಲ ಎನ್ನಲಾಗ್ತಿದೆ. ಹೀಗೆ ಇತ್ತ ದೋಸ್ತಿಗಳೇ ಅಖಾಡಕ್ಕೆ ಯಾರನ್ನ ಇಳಿಸೋದು ಅಂತ ಯೋಚನೆಯಲ್ಲಿರೋವಾಗಲೇ ಇತ್ತ ಕಾಂಗ್ರೆಸ್ ಅದರಲ್ಲೂ ಡಿಕೆಶಿ ಹೊಸ ಆಟ ಶುರುವಿಟ್ಟಿದ್ದಾರೆ. ನೀವು ಯೋಚಿಸುತ್ತಲೇ ಇದ್ದಷ್ಟೂ ನನಗೇ ಒಳ್ಳೇದು ಅಂತ ಇದೀಗ ಏಕಾಏಕಿ ಡಿಸಿಎಂ ಡಿಕೆಶಿ ಚನ್ನಪಟ್ಟಣದಲ್ಲಿ ರಾಷ್ಟ್ರಧ್ವಜ ಹಾರಿಸುವ ಮೂಲಕ ಸ್ವಾತಂತ್ಯ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸೋಕೆ ಮುಂದಾಗಿದ್ದಾರೆ. ಈ ಮೂಲಕ ದೋಸ್ತಿಗಳಿಗೆ ಟಕ್ಕರ್ ನೀಡೋಕೆ ಮುಂದಾಗುವುದರ ಜೊತೆಗೆ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲು ಹೊರಟಿದ್ದಾರೆ. ಯಾಕಂದ್ರೆ ಸ್ವಾತಂತ್ರ್ಯ ದಿನಾಚರಣೆಯಂತ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಧ್ವಾಜಾರೋಹಣ ನೆರವೇರಿಸಿದರೆ, ಜಿಲ್ಲಾ ಮಟ್ಟದಲ್ಲಿ ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಧ್ವಜಾರೋಹಣ ನೆರವೇರಿಸುತ್ತಾರೆ. ಆದರೆ ತಾಲೂಕು ಕೇಂದ್ರದಲ್ಲಿ ಸಚಿವರಿರಲಿ ಅದರಲ್ಲೂ ಉಪಮುಖ್ಯಮಂತ್ರಿಯೊಬ್ಬರು ಧ್ವಜಾರೋಹಣ ನಡೆಸಿದ ಉದಾಹರಣೆಯೇ ಇಲ್ಲ. ಇದೇ ಕುಮಾರಸ್ವಾಮಿ ಚನ್ನಪಟ್ಣದಲ್ಲಿ ೯ ಬಾರಿ ಶಾಸಕರಾಗಿದದ್ರೂ ತಾಲೂಕಿನ ರಾಷ್ಟ್ರೀಯ ಹಬ್ಬದಲ್ಲಿ ಒಂದು ಬಾರಿಯೂ ಪಾಲ್ಗೊಂಡಿಲ್ಲ. ಆದರೆ ಚುನಾವಣೆ ಕಾರಣಕ್ಕಾಗಿ ಇದೀಗ ಡಿ.ಕೆ.ಶಿವಕುಮಾರ್ ಅವರು ಚನ್ನಪಟ್ಟಣದಲ್ಲಿ ಆಗಸ್ಟ್ ೧೫ರಂದು ಧ್ವಜಾರೋಹಣ ನಡೆಸಲು ಮುಂದಾಗಿದ್ದಾರೆ. ಈ ಮೂಲಕ ಹೊಸ ಐತಿಹ್ಯಕ್ಕೆ ಚನ್ನಪಟ್ಟಣ ಸಾಕ್ಷಿಯಾಗಲಿದೆ.
ಲೇಖನ: – ಮೆರಾಜ್ ಡೇ


Share It

You cannot copy content of this page