ನವದೆಹಲಿ: ವಿವಾಹ ನೋಂದಣಿ ಕೇವಲ ಮದುವೆಯ ಸಾಕ್ಷಿಯಷ್ಟೇ; ಶಾಸ್ತ್ರೋಕ್ತವಾಗಿ ನಡೆಯದ ಮದುವೆಗೆ ಕಾನೂನಿನ ಮಾನ್ಯತೆ ಇರುವುದಿಲ್ಲ, ಹಿಂದೂ ವಿವಾಹ ಕಾಯ್ದೆಗೆ ಅನುಸಾರವಾಗಿ ಹಿಂದೂ ಧರ್ಮಿಯರು ವಿವಾಹವಾಗಿದ್ದರೆ ಮಾತ್ರ ವಿಚ್ಚೇದನ ಪ್ರಕರಣಗಳಲ್ಲಿ ನೋಂದಣಿಗೆ ಮಾನ್ಯತೆ ಇರುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಹಿಂದೂ ವಿವಾಹವೆಂದರೆ ಅದೊಂದು ಸಪ್ತಪದಿ ಸೇರಿದಂತೆ ಅಗತ್ಯ ಶಾಸ್ತ್ರಗಳನ್ನು ಪೂರೈಸದೆ ನಡೆಸುವ ಮದುವೆಗೆ ಕಾನೂನಿನ ಮಾನ್ಯತೆಯೇ ಅಲ್ಲದೆ ಇಂಥ ಆಚರಣೆಗಳಿಲ್ಲದೆ ಮಾಡಿಸುವ ಮದುವೆ ನೋಂದಣಿ ಕೂಡಾ ಮದುವೆಗೆ ಮಾನ್ಯತೆ ದೊರಕಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಪೈಲಟ್ ದಂಪತಿಯ ವಿಚ್ಚೇದನ ಪ್ರಕರಣದಲ್ಲಿ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಮತ್ತು ನ್ಯಾ.ಅಗಾಸ್ಟಿನ್ ಜಾರ್ಜ್ ಅವರನ್ನೊಳಗೊಂಡ ಪೀಠ ಇತ್ತೀಚೆಗೆ ಈ ಮಹತ್ವದ ತೀರ್ಪು ನೀಡಿದೆ.
ಹಿಂದೂ ಧರ್ಮದಲ್ಲಿ ವಿವಾಹ ಎಂಬುದು ಸಂಸ್ಕಾರವೇ ಹೊರತು ವಿಜೃಂಭಣೆಯ ಆಚರಣೆಯಲ್ಲ. ಸಪ್ತಪದಿ ಎಂಬುದು ಪತಿ-ಪತ್ನಿಯರು ಪರಸ್ಪರರಿಗೆ ಕೊಡುವ ವಾಗ್ದಾನವಾಗಿದ್ದು, ಬದುಕಿನೂದ್ದಕ್ಕೂ ಸಮಾನ ಗೌರವದಿಂದ ಬಾಳುವ ಪ್ರತಿಜ್ಞೆ. ಇದನ್ನೇ ಹಿಂದೂ ವಿವಾಹ ಕಾಯ್ದೆಯೂ ತಿಳಿಸಿದೆ. ಹೀಗಾಗಿ ಸಪ್ತಪದಿ ಸೇರಿದಂತೆ ನಿರ್ದಿಷ್ಟ ಶಾಸ್ತ್ರ ಪೂರೈಸಿದರೆ ಮಾತ್ರವೇ ಅದನ್ನು ಹಿಂದೂ ವಿವಾಹ ಕಾಯ್ದೆ ಅನ್ವಯ ಮದುವೆ ಎಂದು ಒಪ್ಪಿಕೊಳ್ಳಲು ಸಾಧ್ಯ” ಎಂದು ನ್ಯಾಯಪೀಠ ಹೇಳಿತು.
ಮದುವೆ ನೋಂದಣಿ ಮಾಡಿಸಿದರೆ ಅದೇ ಅಂತಿಮವಾಗುವುದಿಲ್ಲ. ಯಾವುದೇ ಶಾಸ್ತ್ರ, ಸಂಪ್ರದಾಯಗಳಿಲ್ಲದೆ ಕೇವಲ ಸಂಸ್ಥೆಯೊಂದು ನೋಂದಣಿ ದಾಖಲೆ ಪತ್ರ ವಿತರಿಸಿದರೆ ಅದು ವೈವಾಹಿಕ ಜೀವನದ ಅನುಕ್ರಮವನ್ನು ಖಚಿತಪಡಿಸುವುದಿಲ್ಲ. ಮತ್ತು ಹಿಂದೂ ವಿವಾದ ಕಾಯ್ದೆ ಅನ್ವಯ ಮದುವೆಯನ್ನು ಮಾನ್ಯಗೊಳಿಸುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಏನಿದು ಪ್ರಕರಣ?: ಪೈಲಟ್ ದಂಪತಿಯ ವಿಚ್ಛೇದನ ಪ್ರಕರಣದಲ್ಲಿ ಮದುವೆ ನೋಂದಣಿ ಮಾಡಿಸಿದ್ದರೂ ಹಿಂದೂ ವಿವಾಹ ಕಾಯ್ದೆಯ ಅನುಸಾರ ಶಾಸ್ತ್ರೋಕ್ತವಾಗಿ ವಿವಾಹ ನೆರವೇರಿರಲಿಲ್ಲ ಎಂಬುದು ನ್ಯಾಯಾಲಯದ ಗಮನಕ್ಕೆ ಬಂದಿತ್ತು.ಈ ಹಿನ್ನೆಲೆಯಲ್ಲಿ ಮದುವೆ ನೋಂದಣಿಯನ್ನು ಅಮಾನ್ಯಮಾಡಿ ಮದುವೆಯನ್ನು ರದ್ದುಗೊಳಿಸಿದ್ದು ಪತ್ನಿ ಪತಿ ವಿರುದ್ಧ ದಾಖಲಿಸಿದ್ದ ವರದಕ್ಷಿಣೆ ಮತ್ತು ಡಿವೋರ್ಸ್ ಪ್ರಕರಣವನ್ನು ರದ್ದುಮಾಡಿದೆ.