ಸುದ್ದಿ

ಎಚ್ .ಡಿ.ಕುಮಾರಸ್ವಾಮಿ ಅರೆಸ್ಟ್ ಮಾಡೋದಾಗಿ ನಾವೆಲ್ಲೂ ಹೇಳಿಲ್ಲ: ಸಂದರ್ಭ ಬಂದರೆ ಮುಲಾಜಿಲ್ಲದೆ ಬಂಧಿಸುತ್ತೇವೆ: – ಸಿಎಂ ಸಿದ್ದರಾಮಯ್ಯ

Share It

ಕೊಪ್ಪಳ: ಕೇಂದ್ರ ಸಚಿವ, ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿಯವರನ್ನು ಅರೆಸ್ಟ್ ಮಾಡುವುದಾಗಿ ನಾವು ಎಲ್ಲಿಯೂ ಹೇಳಿಲ್ಲ. ಬಂಧಿಸುವ ಸಂದರ್ಭ ಬಂದರೆ ಯಾವುದೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್.ಡಿ. ಕುಮಾರಸ್ವಾಮಿ ಭಯ ಬಿದ್ದಿದ್ದಾರೆ. ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟು ಬಿಡಬಹುದು ಎಂಬ ಆತಂಕವಿದೆ. ಲೋಕಾಯುಕ್ತ ಸಂಸ್ಥೆ ತನಿಖೆ ಮಾಡಿ ಸಾಕ್ಷ್ಯ ಸಂಗ್ರಹಿಸಿ ನಂತರ ಪ್ರಾಸಿಕ್ಯೂಷನ್ ಗೆ ಅನುಮತಿ ಕೇಳಿದೆ.
ಅದರ ಅರ್ಥ ಕುಮಾರಸ್ವಾಮಿ ಅವರ ವಿರುದ್ಧ ಸಾಕ್ಷ್ಯ ಇದೆ. ಸಾಕ್ಷ್ಯಪುರಾವೆ ಇದ್ದರೂ ಅಂತಹ ಪ್ರಕರಣಗಳನ್ನು ಕೈಬಿಟ್ಟುಬಿಡಬೇಕೆ? ಎಂದು ಪ್ರಶ್ನಿಸಿದರು.

ಗಣಿಗಾರಿಕೆಗೆ ಅನುಮತಿ ನೀಡಿದ ವಿಚಾರವಾಗಿ ತನಿಖೆಗೆ ಎಸ್‌ಐಟಿ ರಚಿಸಲಾಗಿತ್ತು. ಸದರಿ ತನಿಖಾ ಸಂಸ್ಥೆ ರಾಜ್ಯಪಾಲರಿಂದ ಪ್ರಾಸಿಕ್ಯೂಷನ್ ಗೆ ಪೂರ್ವಾನುಮತಿ ಕೇಳಿದೆ. ನಾವಾಗಲೀ, ಖಾಸಗಿ ವ್ಯಕ್ತಿಯಾಗಲೀ ಅನುಮತಿ ಕೇಳಿಲ್ಲ. ರಾಜ್ಯಪಾಲರು ಅನುಮತಿ ಕೊಟ್ಟಿಲ್ಲ. ಹಲವು ದಿನಗಳಿಂದಲೂ ಅರ್ಜಿ ಬಾಕಿ ಉಳಿದಿದೆ. ಸೋಮವಾರ ಲೋಕಾಯುಕ್ತ ಸಂಸ್ಥೆ ಎರಡನೇ ಪತ್ರ ಬರೆದಿದೆ ಎಂದರು.

ಎ.ಜೆ.ಅಬ್ರಹಾಂ ದೂರು ಕೊಟ್ಟ ಕೆಲವೇ ಗಂಟೆಗಳಲ್ಲಿ ನನಗೆ ಶೋಕಾಸ್ ನೋಟೀಸ್ ನೀಡಿದ್ದರು. ಮೈಸೂರಿನ ಮುಡಾ ಪ್ರಕರಣದಲ್ಲಿ ಯಾವುದೇ ಪೊಲೀಸ್ ಅಧಿಕಾರಿಗಳು ಅಥವಾ ಲೋಕಾಯುಕ್ತ ಪೊಲೀಸರು ಪ್ರಾಸಿಕ್ಯೂಷನ್ ಗೆ ಅನುಮತಿ ಕೇಳಿರಲಿಲ್ಲ. ಪ್ರಾಥಮಿಕ ತನಿಖೆಯೂ ಆಗಿರಲಿಲ್ಲ. ಆದರೂ ರಾಜ್ಯಪಾಲರು ಪೂರ್ವಾನುಮತಿ ನೀಡಿದ್ದಾರೆ. ಕುಮಾರಸ್ವಾಮಿ ಪ್ರಕರಣದಲ್ಲಿ ತನಿಖೆಯಾಗಿದ್ದರೂ ಅನುಮತಿ ಕೊಟ್ಟಿಲ್ಲ. ಇದು ತಾರತಮ್ಯ ಅಲ್ಲವೇ? ಎಂದು ಪ್ರಶ್ನಿಸಿದರು.


Share It

You cannot copy content of this page