ಸುದ್ದಿ

ವಿಚ್ಛೇದನ ಪ್ರಕರಣ: ತಿಂಗಳಿಗೆ 6 ಲಕ್ಷ ಜೀವನಾಂಶ ಕೇಳಿದ ಪತ್ನಿ: ಪತಿಯ ಸಂಪಾದನೆ ಆಧರಿಸಿ ಪತ್ನಿಗೆ ಜೀವನಾಂಶ ನೀಡಲಾಗದು: ಹೈಕೋರ್ಟ್

Share It

ಬೆಂಗಳೂರು: ವೈವಾಹಿಕ ಸಂಬಂಧ ಮುರಿದುಬಿದ್ದಿರುವ ಹಿನ್ನೆಲೆಯಲ್ಲಿ ಗಂಡನಿಂದ ಮಾಸಿಕ 6.16 ಲಕ್ಷ ರು.ಜೀವನಾಂಶ ಕೋರಿರುವ ಪತ್ನಿಯ ಮನವಿಗೆ ಅಚ್ಚರಿ ವ್ಯಕ್ತಪಡಿಸಿರುವ ಹೈಕೋರ್ಟ್ ಇಷ್ಟು ಹಣವನ್ನು ಖರ್ಚು ಮಾಡಬೇಕೆಂದು ಬಯಸಿದರೆ ತಾನೇ ದುಡಿಯಬೇಕು ಎಂದು ಸ್ಪಷ್ಟವಾಗಿ ಹೇಳಿದೆ.

ವಿಚ್ಛೇದನ ಹಿನ್ನೆಲೆಯಲ್ಲಿ ಕೌಟುಂಬಿಕ ನ್ಯಾಯಾಲಯ ತನಗೆ ಮಾಸಿಕ 50000 ರು. ಜೀವನಾಂಶ ನಿಗದಿಪಡಿಸಿದೆ. ತನ್ನ ತಿಂಗಳ ಖರ್ಚು 6.16 ಲಕ್ಷವಾಗುತ್ತಿದ್ದು,ಕನಿಷ್ಠ 5 ಲಕ್ಷ ಮಾಸಿಕ ಜೀವನಾಂಶ ಪಾವತಿಸಲು ಪತಿಗೆ ಆದೇಶಿಸಬೇಕು ಎಂದು ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿ ಇತ್ತೀಚೆಗೆ ಹೈಕೋರ್ಟ್ ವಿಚಾರಣೆಗೆ ಬಂದಿತ್ತು.

ಅರ್ಜಿದಾರರ ಅರ್ಜಿ ಕಂಡು ಅಚ್ಚರಿ ವ್ಯಕ್ತಪಡಿಸಿದ ನ್ಯಾ.ಲಲಿತಾ ಕನ್ನೆಘಂಟಿ ಅವರು ತಿಂಗಳ ಖರ್ಚಿಗಾಗಿ ಅರ್ಜಿದಾರೆಗೆ 6.16 ಲಕ್ಷ ಬೇಕೆ ಎಂದು ಪ್ರಶ್ನಿಸಿದರು? ಪತಿ ಎಷ್ಟು ಸಂಪಾದನೆ ಮಾಡುತ್ತಿದ್ದಾರೆ ಎಂಬುದನ್ನು ಆಧರಿಸಿ ಪತ್ನಿಗೆ ಜೀವನಾಂಶ ನೀಡಲಾಗದು. ಇದು ಜೀವನಾಂಶ ಕೇಳುವ ಕ್ರಮವಲ್ಲ, ನಿಜವಾಗಿಯೂ ವಸೂಲಿ ಮಾಡುವುದಾಗಿದೆ. ಪತ್ನಿಗೆ ಮಾಸಿಕ ಜೀವನಾಂಶ 6.16 ಲಕ್ಷ ರು.ಬೇಕಾದರೆ ತಾನೇ ದುಡಿದು ಸಂಪಾದಿಸಲಿ, ಪತಿ ಸಂಪಾದನೆ ಕೇಳುವುದಲ್ಲ. ಪತಿ ಮಕ್ಕಳ ಆರೈಕೆ ಸೇರಿದಂತೆ ಬೇರೆ ಜವಾಬ್ದಾರಿ ನಿರ್ವಹಿಸುವುದು ಬೇಡವೇ ಎಂದು ಪ್ರಶ್ನಿಸಿದೆ.

ಇದಕ್ಕೆ ಉತ್ತರಿಸಿದ ಪತ್ನಿಯ ಪರ ವಕೀಲರು ಅರ್ಜಿದಾರರಿಗೆ ಊಟದ ಖರ್ಚು ತಿಂಗಳಿಗೆ 40 ಸಾವಿರ ರು.ಖರ್ಚಾಗುತ್ತಿದೆ. ಬಟ್ಟೆ ಔಷಧ,ಸೌಂದರ್ಯವರ್ಧಕ ಸೇರಿ 60 ಸಾವಿರ ರು.ಬೇಕಿದೆ ಎಂದು ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು ಈ ವಿಚಾರಗಳನ್ನು ಕೋಟ್೯ಗೆ ಹೇಳಬೇಡಿ. ಅಲ್ಲದೆ,ಅರ್ಜಿದಾರೆಯು ಮಗುವಿನ ಆರೈಕೆಗೆ ತಗಲುವ ಖರ್ಚುವೆಚ್ಚದ ಬಗ್ಗೆಯು ತಿಳಿಸಿಲ್ಲ. ಅರ್ಜಿದಾರೆಯ ವಾಸ್ತವಿಕ ಖರ್ಚುವೆಚ್ಚಗಳನ್ನು ನ್ಯಾಯಾಲಯಕ್ಕೆ ತಿಳಿಸಬೇಕು. ಇಲ್ಲವಾದರೆ ಅರ್ಜಿಯನ್ನುವಜಾಗೊಳಿಸಲಾಗುವುದು.ನ್ಯಾಯಯುತವಾಗಿ ನಡೆದುಕೊಳ್ಳಲು ನಿಮಗೆ ಕೊನೆಯ ಅವಕಾಶ ನೀಡಲಾಗುತ್ತಿದೆ ಎಂದು ವಕೀಲರಿಗೆ ಸೂಚಿಸಿತು.

ಅರ್ಜಿದಾರೆ ಅಂತಿಮವಾಗಿ ಮಾಸಿಕ ಖರ್ಚಿನ ವಿವರಗಳನ್ನು ಒಳಗೊಂಡ ಪ್ರಮಾಣಪತ್ರವನ್ನು ಸಲ್ಲಿಸಬೇಕು ನಂತರ ಕೋಟ್೯ ಆದೇಶ ಹೊರಸಲಿದೆ ಎಂದು ಸೂಚಿಸಿ ವಿಚಾರಣೆಯನ್ನು ಸೆ.9ಕ್ಕೆ ಮುಂದೂಡಿದೆ.


Share It

You cannot copy content of this page