ಸುದ್ದಿ

ಲೈಂಗಿಕ ಕಿರುಕುಳ: ಸರ್ಕಾರಿ ವೈದ್ಯಾಧಿಕಾರಿ ವಿರುದ್ಧದ ಕ್ರಿಮಿನಲ್ ಕೇಸ್ ರದ್ದತಿಗೆ ನಿರಾಕರಿಸಿದ ಹೈಕೋರ್ಟ್

Share It

ಬೆಂಗಳೂರು: ವೈದ್ಯೆಗೆ ಲೈಂಗಿಕ ಕಿರುಕುಳ ನೀಡಿದ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿ ಆಕೆಯ ಘನತೆಗೆ ಧಕ್ಕೆ ತಂದ ಆರೋಪದಡಿ ಕುಂದಾಪುರದ ತಾಲೂಕು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ರಾಬರ್ಟ್ ರೆಬೆಲ್ಲೋ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.

ಕುಂದಾಪುರ ಠಾಣೆ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಡಾ.ರಾಬರ್ಟ್‌ ರೆಬೆಲ್ಲೋ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಪೀಠ, ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡುವ ವೈದ್ಯರನ್ನು ಸುಮ್ಮನೆ ಬಿಡಲು ಸಾಧ್ಯವೇ ಇಲ್ಲ ಎಂದು ನುಡಿದಿದೆ.

ಅಲ್ಲದೇ, ದಾಖಲೆಗಳನ್ನು ಪರಿಶೀಲಿಸಿದರೆ ಅರ್ಜಿದಾರ ವೈದ್ಯ ದೂರುದಾರ ವೈದ್ಯೆಗೆ ಕಿರುಕುಳ ನೀಡಿರುವುದು ಮೇಲ್ನೋಟಕ್ಕೆ ತಿಳಿಯುತ್ತದೆ. ಈ ಹಂತದಲ್ಲಿ ಎಫ್‌ಐಆರ್‌ ರದ್ದುಪಡಿಸಲಾಗದು. ಪ್ರಕರಣ ಸಂಬಂಧ ತನಿಖಾಧಿಕಾರಿಗಳು ದೋಷಾರೋಪ ಪಟ್ಟಿ ಸಲ್ಲಿಸಲಿ. ನಂತರ ಆರೋಪಗಳನ್ನು ಕೈಬಿಡಲು ಕೋರಿ ಆರೋಪಿ ವೈದ್ಯ ಅರ್ಜಿ ಸಲ್ಲಿಸಬಹುದು ಎಂದು ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಅರ್ಜಿಯನ್ನು ಅರ್ಜಿದಾರ ಪರ ವಕೀಲರು ಹಿಂಪಡೆದಿದ್ದಾರೆ.

ಮಧ್ಯರಾತ್ರಿ ಊಟಕ್ಕೆ ಕರೆದ ವೈದ್ಯ?: ವಿಚಾರಣೆ ವೇಳೆ ವೈದ್ಯರ ಪರ ವಕೀಲರು, ಕರ್ತವ್ಯ ಸಮಯದ ನಂತರ ಮತ್ತು ಮಧ್ಯರಾತ್ರಿಯಲ್ಲಿ ವೈದ್ಯೆಗೆ ಸಂದೇಶ ಕಳುಹಿಸಿದ ಮತ್ತು ವಿಡಿಯೋ ಕಾಲ್‌ ಮಾಡಿ ದೂರುದಾರ ವೈದ್ಯೆಗೆ ಕಿರುಕುಳ ನೀಡಿದ ಆರೋಪ ಅರ್ಜಿದಾರರ ಮೇಲಿದೆ. ಆದರೆ, ಅರ್ಜಿದಾರರು ಯಾವುದೇ ಅಪರಾಧ ಎಸಗಿಲ್ಲ ಎಂದು ತಿಳಿಸಿದರು.

ಇದಕ್ಕೆ ಬೇಸರಗೊಂಡ ನ್ಯಾಯಪೀಠ, ಏಕೆ ಮಧ್ಯರಾತ್ರಿ ಸಂದೇಶ ಕಳುಹಿಸಲಾಗಿದೆ ಹಾಗೂ ಕರೆ ಮಾಡಲಾಗಿದೆ ಎಂದು ಪ್ರಶ್ನಿಸಿತು. ಅದಕ್ಕೆ, ಅರ್ಜಿದಾರ ವಕೀಲರು, ದೂರುದಾರೆಗೆ ಯಾವುದೇ ಅಶ್ಲೀಲ ಅಥವಾ ಅಪರಾಧ ಸಂದೇಶವನ್ನು ಅರ್ಜಿದಾರರು ಕಳುಹಿಸಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಮತ್ತೇನು? ಗುಡ್‌ ಮಾರ್ನಿಂಗ್‌, ಗುಡ್‌ ನೈಟ್‌ ಮಸೇಜ್‌ ಕಳುಹಿಸಿದ್ದೀರಾ? ಎಂದಿತು.
ಅರ್ಜಿದಾರರ ಪರ ವಕೀಲರು ಉತ್ತರಿಸಿ, ಅದು ಸಹ ಇದೆ. ಕೆಲ ಚರ್ಚೆಯ ಸಂದೇಶ ಕಳುಹಿಸಲಾಗಿದೆ. ಅವು ಅಪರಾಧದ ಸಂದೇಶಗಳಲ್ಲ. ದೂರುದಾರೆ ಸಹ ಆರೋಪಿಯ ಸಂದೇಶಕ್ಕೆ ಉತ್ತರಿಸಿದ್ದಾರೆ ಎಂದು ಸಮಜಾಯಿಸಿ ನೀಡಿದರು.

ಇದಕ್ಕೆ ಅಸಮಾಧಾನಗೊಂಡ ನ್ಯಾಯಪೀಠ, ನೀವು ಯಾವ ಸಂದೇಶ ಕಳುಹಿಸಿದ್ದೀರಾ? ಎಂಬ ಬಗ್ಗೆ ದಾಖಲೆಗಳು ಕೋರ್ಟ್‌ ಮುಂದಿವೆ. ಅವುಗಳನ್ನು ನಿಮಗೆ ನೀಡಲೇ? ತಡರಾತ್ರಿ ಊಟಕ್ಕೆ ಬರುವಂತೆ ದೂರುದಾರೆಗೆ ಏಕೆ ಹೇಳುತ್ತಿದ್ದೀರಿ? ಅರ್ಜಿದಾರ ಸರ್ಕಾರಿ ನೌಕರ. ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುವವರು. ಸಿಬ್ಬಂದಿಯನ್ನು ಲೈಂಗಿಕವಾಗಿ ಹಿಂಸಿಸುವ ವೈದ್ಯರನ್ನು ಬಿಡಲು ಸಾಧ್ಯವೇ ಇಲ್ಲ. ದೋಷಾರೋಪ ಪಟ್ಟಿ ಸಲ್ಲಿಸಿದ ನಂತರ ಎಲ್ಲಾ ಸಂಗತಿಗಳು ತಿಳಿಯಲಿವೆ ಎಂದಿತು.
(CRL.P 6903/2024)
ಮೂಲ:- LAW TIME


Share It

You cannot copy content of this page