ಸುದ್ದಿ

ಡಿಸಿ ನಿಂದಿಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪ: ವಕೀಲನ ವಿರುದ್ಧ ಬಲವಂತದ ಕ್ರಮ ಜರುಗಿಸದಿರಲು ಹೈಕೋರ್ಟ್‌ ಆದೇಶ

Share It

ಬೆಂಗಳೂರು: ಅನುಮತಿ ಇಲ್ಲದೇ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ತಮ್ಮನ್ನು ನಿಂದಿಸಿದ್ದಾರೆ ಜತೆಗೆ ಸಾರ್ವಜನಿಕ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ಹಾಸನ ಜಿಲ್ಲಾಧಿಕಾರಿ ದಾಖಲಿಸಿರುವ ದೂರಿನ ಮೇರೆಗೆ ವಕೀಲರ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸದಂತೆ ಹೈಕೋರ್ಟ್ ಆದೇಶಿಸಿದೆ.

ಹಾಸನ ಜಿಲ್ಲಾಧಿಕಾರಿ ಸತ್ಯಭಾಮ ನೀಡಿರುವ ದೂರಿನ ಮೇರೆಗೆ ದಾಖಲಿಸಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ವಕೀಲ ಜಿ.ದೇವರಾಜೇಗೌಡ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಪೀಠ ಈ ನಿರ್ದೇಶನ ನೀಡಿದೆ.

ಪ್ರಕರಣದ ಹಿನ್ನೆಲೆ: ವಕೀಲ ದೇವರಾಜೇಗೌಡ ಅವರು ಹಾಸನ ಜಿಲ್ಲಾಧಿಕಾರಿ ವಿರುದ್ಧ 2024ರ ಮಾರ್ಚ್ ತಿಂಗಳಲ್ಲಿ ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ ಚನ್ನರಾಯಪಟ್ಟಣದ ಆದ್ಯಾಸ್ ಬಾರ್ ಅಂಡ್ ರೆಸ್ಟೋರೆಂಟ್ ಕಾನೂನು ಬಾಹಿರವಾಗಿ ನಡೆಯುತ್ತಿದೆ. ಈ ಕುರಿತಂತೆ ಅಬಕಾರಿ ಅಧಿಕಾರಿಗಳು ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ವರದಿ ಮಾಡಿದ್ದಾರೆ. ಆದರೆ ಜಿಲ್ಲಾಧಿಕಾರಿ ಸತ್ಯಭಾಮಾ ಅವರು ಬಾರ್ ಅಂಡ್ ರೆಸ್ಟೋರೆಂಟ್ ವಿರುದ್ಧ ಕ್ರಮ ಜರುಗಿಸಿಲ್ಲ. ಬದಲಿಗೆ ಕಡತಗಳನ್ನು ಬಾಕಿ ಉಳಿಸಿಕೊಂಡು ಅಕ್ರಮಕ್ಕೆ ಸಾಥ್ ನೀಡಿದ್ದಾರೆ ಎಂದು ಆರೋಪಿಸಿದ್ದರು.

ಆ ಬಳಿಕ ದೂರು ದಾಖಲಿಸಿರುವ ಜಿಲ್ಲಾಧಿಕಾರಿ ಸತ್ಯಭಾಮಾ ಅವರು, ನನ್ನ ಅನುಮತಿ ಇಲ್ಲದೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಕೀಲರು ಸುದ್ದಿಗೋಷ್ಠಿ ನಡೆಸಿ, ನಿಂದಿಸಿದ್ದಾರೆ. ಈ ಮೂಲಕ ಸಾರ್ವಜನಿಕ ಕರ್ತವ್ಯಕ್ಕೆ ಅಡ್ಡಿ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ಹಾಸನ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಮೇರೆಗೆ ಪೊಲೀಸರು ಐಪಿಸಿ ಸೆಕ್ಷನ್‌ 353 (ಸಾರ್ವಜನಿಕ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಲು ಹಲ್ಲೆ ಅಥವಾ ಬಲಪ್ರಯೋಗ) ಆರೋಪದಡಿ ಎಫ್‌ಐಆರ್‌ ದಾಖಲಿಸಿದ್ದಾರೆ. ಈ ಪ್ರಕರಣ ರದ್ದು ಕೋರಿ ವಕೀಲ ದೇವರಾಜೇಗೌಡ ಹೈಕೋರ್ಟ್ ಮೊರೆ ಹೋಗಿದ್ದಾರೆ.


Share It

You cannot copy content of this page