ಸುದ್ದಿ

ಕಾಂಗ್ರೆಸ್ ಶಾಸಕ ರಂಗನಾಥ್ ಆಯ್ಕೆ ರದ್ದುಮಾಡುವಂತೆ ಕೋರಿ ಸುಪ್ರೀಂಕೋರ್ಟ್ ಗೆ ಅರ್ಜಿ

Share It

ನವದೆಹಲಿ: ಕುಣಿಗಲ್ ಕ್ಷೇತ್ರದ ಕಾಂಗ್ರೆಸ್ ಶಾಸಕ ರಂಗನಾಥ್ ಅವರ ಆಯ್ಕೆಯನ್ನು ರದ್ದು ಮಾಡಬೇಕು ಎಂದು ಕೋರಿ ಪರಾಜಿತ ಬಿಜೆಪಿ ಅಭ್ಯರ್ಥಿ ಕೃಷ್ಣಕುಮಾ‌ರ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.

ತುಮಕೂರಿನ ಕುಣಿಗಲ್ ಕ್ಷೇತ್ರದ ಶಾಸಕ
ಡಾ.ಎಚ್.ಡಿ.ರಂಗನಾಥ್ ಅವರು 2023 ರಲ್ಲಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಅಕ್ರಮವಾಗಿ ಆಯ್ಕೆಯಾಗಿದ್ದಾರೆ ಎಂದು ಬಿಜೆಪಿಯ ಪರಾಜಿತ ಅಭ್ಯರ್ಥಿ ಡಿ.ಕೃಷ್ಣಕುಮಾರ್ ಅವರು ಆರೋಪಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಲು ಸೂಚಿಸಿ ಕಾಂಗ್ರೆಸ್ ಶಾಸಕರಿಗೆ ನ್ಯಾಯಾಲಯ ಮಂಗಳವಾರ ನೋಟಿಸ್ ಜಾರಿ ಮಾಡಿದೆ.

ಈ ಹಿಂದೆ ರಂಗನಾಥ್ ಅವರ ಆಯ್ಕೆಯನ್ನು ರದ್ದು ಮಾಡಬೇಕು ಎಂದು ಕೋರಿ ಬಿಜೆಪಿ ನಾಯಕ ಕೃಷ್ಣಕುಮಾ‌ರ್ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದನ್ನು ಕೋರ್ಟ್ ತಿರಸ್ಕರಿಸಿತ್ತು. ಇದರ ವಿರುದ್ಧ ಅವರು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಕಾಂಗ್ರೆಸ್‌ ಶಾಸಕರಿಗೆ ನೋಟಿಸ್ ರವಾನಿಸಿದೆ.
ಪರಾಜಿತ ಅಭ್ಯರ್ಥಿ ಮಾಡಿರುವ ಆರೋಪಗಳ ಬಗ್ಗೆ ಸೆಪ್ಟೆಂಬರ್ 23 ರೊಳಗೆ ಪ್ರತಿಕ್ರಿಯಿಸಿ. ಈ ಬಗ್ಗೆ ಯಾವುದಾದರೂ ತಕರಾರು ಮತ್ತು ದಾಖಲೆಗಳಿದ್ದರೆ ಕೋರ್ಟ್‌ಗೆ ಸಲ್ಲಿಸಿ ಎಂದು ನೋಟಿಸ್‌ನಲ್ಲಿ ಸೂಚಿಸಲಾಗಿದೆ.

ಏನಿದು ಆರೋಪ?: ಕುಣಿಗಲ್ ಶಾಸಕ ರಂಗನಾಥ್ ಅವರು ಚುನಾವಣೆಯ ವೇಳೆ ಅಕ್ರಮ ಎಸಗಿದ್ದಾರೆ. ಅಡುಗೆ ಸಾಮಾನು, ಡಿನ್ನರ್ ಸೆಟ್, ಪ್ರೀಪೇಯ್ಡ್ ಕಾರ್ಡ್‌ಗಳನ್ನು ನೀಡಿ ಮತದಾರರಿಗೆ ಆಮಿಷವೊಡ್ಡಿದ್ದಾರೆ ಎಂದು ಆರೋಪಿಸಿ, ಅವರ ಆಯ್ಕೆಯನ್ನು ರದ್ದು ಮಾಡಬೇಕು ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಕೃಷ್ಣಕುಮಾರ್ ಅವರು ಮನವಿ ಮಾಡಿದ್ದಾರೆ. ಇದರ ಜೊತೆಗೆ ರಂಗನಾಥ್ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಮ್ಮ ಆಸ್ತಿ ಮತ್ತು ಹೊಣೆಗಾರಿಗೆ ಬಗ್ಗೆಯೂ ಸುಳ್ಳು ಹೇಳಿದ್ದರೆ ಎಂದು ಅರ್ಜಿಯಲ್ಲಿ ದೂರಲಾಗಿದೆ.


Share It

You cannot copy content of this page