ಸುದ್ದಿ

ವಿದ್ಯಾರ್ಥಿನಿಯರು ಬಟ್ಟೆ ಬದಲಿಸುವ ವೇಳೆ ಫೋಟೋ-ವಿಡಿಯೋ ಮಾಡಿದ ಆರೋಪ: ವಸತಿ ಶಾಲೆ ಶಿಕ್ಷಕನ ವಿರುದ್ಧದ ಕೇಸ್ ರದ್ದುಪಡಿಸಲು ನಿರಾಕರಿಸಿದ ಹೈಕೋರ್ಟ್

Share It

ಬೆಂಗಳೂರು: ವಸತಿ ಶಾಲೆಯ ವಿದ್ಯಾರ್ಥಿನಿಯರು ಬಟ್ಟೆ ಬದಲಿಸುವ ವೇಳೆ ಫೋಟೋ ತೆಗೆದ ಮತ್ತು ವಿಡಿಯೋ ಚಿತ್ರೀಕರಿಸಿದ ಆರೋಪದಡಿ ವಸತಿ ಶಾಲೆಯ ಶಿಕ್ಷಕನ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.

ಇದೇ ವೇಳೆ ಶಿಕ್ಷಕನೋರ್ವನ ವಿರುದ್ಧ ಇಂತಹ ಆರೋಪ ಕೇಳಿಬಂದಿರುವುದು ನಿಜಕ್ಕೂ ಅಘಾತಕಾರಿ ವಿಚಾರ. ಆತ ನಿರ್ದೋಷಿಯಾಗಿದ್ದರೆ ಪ್ರಕರಣದ ಸಂಪೂರ್ಣ ವಿಚಾರಣೆಯ ನಂತರವೇ ಆತನು ತನ್ನ ವಿರುದ್ಧದ ಆರೋಪಗಳಿಂದ ಹೊರಬರಬೇಕಿದೆ. ಈ ಹಂತದಲ್ಲಿ ಪ್ರಕರಣವನ್ನು ರದ್ದುಪಡಿಸುವಂತೆ ಮಾಡಿರುವ ಮನವನಿಯನ್ನು ಪರಿಗಣಿಸಲು ಸಾಧ್ಯವೇ ಇಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ.

ಶಾಲೆಯ ವಿದ್ಯಾರ್ಥಿನಿಯರ ಫೋಟೋ ಕ್ಲಿಕ್ಕಿಸಿದ ಆರೋಪದಡಿ ತನ್ನ ವಿರುದ್ಧ ಪೋಕ್ಸೊ ಕಾಯ್ದೆಯ ಸೆಕ್ಷನ್ 12ರ ಅಡಿ ದಾಖಲಿಸಿರುವ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಕೋಲಾರದ ಸರ್ಕಾರಿ ವಸತಿ ಶಾಲೆಯ ಚಿತ್ರಕಲಾ ಶಿಕ್ಷಕ ಮುನಿಯಪ್ಪ (46) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ನೀಡಿದೆ.

ಹೈಕೋರ್ಟ್ ತನ್ನ ತೀರ್ಪಿನಲ್ಲಿ, ಆಘಾತಕಾರಿ ಸಂಗತಿಯೆಂದರೆ ಆರೋಪಿಯ ಬಳಿ ವಿವಿಧ ಬ್ರಾಂಡ್‌ಗಳ ಐದು ಮೊಬೈಲ್ ಫೋನ್‌ಗಳಿವೆ. ಎಲ್ಲ ಮೊಬೈಲ್‌ಗಳನ್ನು ವಶಪಡಿಸಿಕೊಂಡು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ. ಪ್ರತಿ ಮೊಬೈಲ್ ಫೋನ್‌ನಲ್ಲಿ ಸಾವಿರಾರು ಚಿತ್ರಗಳು ಮತ್ತು ನೂರಾರು ವೀಡಿಯೊಗಳಿವೆ ಎನ್ನಲಾಗಿದೆ. ಶಿಕ್ಷಕನಾಗಿರುವ ಆರೋಪಿಯ ಬಳಿ ಐದು ಮೊಬೈಲ್‌ಗಳು ಏಕೆ ಇವೆ ಎಂಬುದನ್ನು ವಿವರಿಸಿಲ್ಲ. ಅವುಗಳಲ್ಲಿನ ವಿಡಿಯೋಗಳು ಮತ್ತು ಚಿತ್ರಗಳು ಯಾವುವು ಎಂಬುದು ತನಿಖೆಯ ವಿಷಯವಾಗಿದೆ ಎಂದು ಹೇಳಿದೆ.

ಅಲ್ಲದೇ, ಶಿಕ್ಷಕ ಮುನಿಯಪ್ಪ ವಸತಿ ಶಾಲೆಯಲ್ಲಿ ಅಪ್ರಾಪ್ತ ಬಾಲಕಿಯರು ಬಟ್ಟೆ ಬದಲಿಸುವಾಗ ಅವರ ವಿಡಿಯೋ ಮತ್ತು ಫೋಟೋ ಕ್ಲಿಕ್ಕಿಸಿದ್ದ ಎಂದು ಆರೋಪಿಸಲಾಗಿದೆ. ಆತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಇಂತಹ ಕೃತ್ಯವನ್ನು ಅಪರಾಧವೆಂದು ಪರಿಗಣಿಸಲಾಗದಿದ್ದರೆ ಮತ್ತಿನ್ನೇನನ್ನು ಅಪರಾಧ ಎಂದು ಕರೆಯಲು ಸಾಧ್ಯ ಎಂದು ಹೈಕೋರ್ಟ್ ಪ್ರಕರಣದ ತೀವ್ರತೆಯನ್ನು ವ್ಯಾಖ್ಯಾನಿಸಿದೆ.
(CRIMINAL PETITION No.2418 OF 2024)
ಮೂಲ:- LAW TIME


Share It

You cannot copy content of this page