ಕಾನೂನು

“ರಾಜ್ಯಪಾಲರು ಅನುಮತಿಗೆ ಕಾರಣವನ್ನೇ ನೀಡಿಲ್ಲ”: ಮುಡಾ ಕೇಸ್ ತೀರ್ಪು ಕಾಯ್ದಿರಿಸಿದ ಹೈಕೋರ್ಟ್

Share It

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) ಅಕ್ರಮವಾಗಿ ತಮ್ಮ ಕುಟುಂಬ ಸದಸ್ಯರ ಹೆಸರಿಗೆ ಸೈಟುಗಳನ್ನು ಪಡೆದಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್, ತೀರ್ಪನ್ನು ಕಾಯ್ದಿರಿಸಿದೆ.

ಗುರುವಾರ ಅರ್ಜಿ ವಿಚಾರಣೆ ಪೂರ್ಣಗೊಳಿಸಿದ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಪೀಠ ಪ್ರಕರಣದ ತೀರ್ಪನ್ನು ಕಾಯ್ದಿರಿಸಿದೆ. ಇದೇ ವೇಳೆ ಮುಖ್ಯಮಂತ್ರಿಗಳ ವಿರುದ್ಧ ತನಿಖೆಗೆ ಆದೇಶಿಸುವಂತೆ ಕೋರಿ ವಿಚಾರಣಾ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕ್ರಿಯೆಗೆ ಈ ಹಿಂದೆ ನೀಡಿದ್ದ ತಡೆಯಾಜ್ಞೆಯನ್ನು ಮುಂದಿನ ವಿಚಾರಣೆವರೆಗೂ ವಿಸ್ತರಿಸಿದೆ.

ಸಿಎಂ ಪರ ವಕೀಲರ ವಾದ: ಅಂತಿಮ ದಿನದ ವಿಚಾರಣೆ ವೇಳೆ ಸಿಎಂ ಪರ ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಹಾಗೂ ಪ್ರೊ. ರವಿವರ್ಮಕುಮಾರ್ ಸುದೀರ್ಘ ವಾದ ಮಂಡಿಸಿ, ರಾಜ್ಯಪಾಲರು ಜನರಿಂದ ಆಯ್ಕೆಯಾಗಿಲ್ಲ, ನೇಮಕಗೊಂಡಿದ್ದಾರೆ. ಹೀಗಾಗಿ, ರಾಜ್ಯಪಾಲರು ಹೆಚ್ಚಿನ ಉತ್ತರದಾಯಿತ್ವ ಹೊಂದಿದ್ದು, ಅತಿ ವಿರಳ ಸಂದರ್ಭದಲ್ಲಿ ಮಾತ್ರ ವಿವೇಚನಾಧಿಕಾರ ಬಳಸಬೇಕು. ರಾಜ್ಯಪಾಲರು 23 ವರ್ಷದ ಹಳೆಯ ಪ್ರಕರಣದ ತನಿಖೆಗೆ ಅನುಮತಿ ನೀಡಿದ್ದಾರೆ. ಈ ಪ್ರಕರಣ ಸಂಪೂರ್ಣ ರಾಜಕೀಯ ಪ್ರೇರಿತ. ಸೆಕ್ಷನ್ 17ಎ ಅಡಿ ಅನುಮತಿ ನೀಡುವಾಗ ಸಚಿವ ಸಂಪುಟದ ಶಿಫಾರಸು ಪಾಲಿಸಬೇಕು. ಪಾಲಿಸದಿದ್ದರೆ ರಾಜ್ಯಪಾಲರು ಅದರ ಹೊಣೆ ಹೊರಬೇಕಾಗುತ್ತದೆ.

ರಾಜ್ಯಪಾಲರು ಸಚಿವ ಸಂಪುಟದ ಶಿಫಾರಸನ್ನು ಸಾರಾಸಗಟಾಗಿ ತಳ್ಳಿಹಾಕುವಂತಿಲ್ಲ ಎಂದರು.
ಹಾಗೆಯೇ, ರಾಜ್ಯಪಾಲರು ಸಚಿವ ಸಂಪುಟದ ಶಿಫಾರಸನ್ನು ತಪ್ಪು ಎಂದೂ ಹೇಳಿಲ್ಲ. ಹಾಗೆ ಹೇಳದೆ ಮತ್ತು ಸಕಾರಣವನ್ನೇ ತಿಳಿಸದೆ ಸಚಿವ ಸಂಪುಟದ ನಿರ್ಧಾರವನ್ನು ತಾರತಮ್ಯದಿಂದ ಕೂಡಿದೆ ಎನ್ನಲಾಗದು. ಇನ್ನು ರಾಜ್ಯಪಾಲರು ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳಬೇಕಿತ್ತು. 1000 ಪುಟಗಳ ದಾಖಲೆ ಪರಿಶೀಲಿಸಿ 5 ಪುಟಗಳಲ್ಲಿ ತನ್ನ ತೀರ್ಮಾನ ಹೇಳಿರುವುದು ಸೂಕ್ತವಲ್ಲ. ರಾಜ್ಯಪಾಲರ ಆದೇಶ ಓದಿದರೆ ಎಲ್ಲವೂ ಸ್ಪಷ್ಟವಾಗಿ ಅರ್ಥವಾಗುವಂತಿರಬೇಕು ಎಂದು ಪೀಠಕ್ಕೆ ವಿವರಿಸಿದರು.

ರಾಜ್ಯಪಾಲರು ಪಕ್ಷಾತೀತರಾಗಿರಬೇಕು. ಆದರೆ, ಹಲವು ರಾಜ್ಯಪಾಲರು ರಾಜಿನಾಮೆ ನೀಡಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಖಾಸಗಿ ದೂರುದಾರರಿಗೆ ಸಕ್ಷಮ ಪ್ರಾಧಿಕಾರಕ್ಕೆ ದೂರು ಸಲ್ಲಿಸಲು ಅವಕಾಶ ನೀಡಬಾರದು. ವಿಪಕ್ಷ ಸರ್ಕಾರಗಳ ವಿರುದ್ಧ ದೂರುಗಳು ದಾಖಲಿಸಲು ಬಳಕೆಯಾಗಬಹುದು ಎಂದರು. ಹಾಗೆಯೇ, ಮುಖ್ಯಮಂತ್ರಿಗಳ ವಿರುದ್ಧ ಯಾಕೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದೇನೆ ಎಂಬುದಕ್ಕೆ ರಾಜ್ಯಪಾಲರಲ್ಲಿ ಉತ್ತರವಿಲ್ಲ. ಶೂನ್ಯ ಉತ್ತರದೊಂದಿಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ.

ಸಿಎಂ ಹೇಗೆ, ಯಾವ ನಿರ್ಧಾರ, ಶಿಫಾರಸು ಮೂಲಕ ಪ್ರಭಾವ ಬೀರಿದ್ದಾರೆ. ಇದ್ಯಾವುದನ್ನೂ ರಾಜ್ಯಪಾಲರು ತಮ್ಮ ಆದೇಶದಲ್ಲಿ ಉಲ್ಲೇಖಿಸಿಲ್ಲ. ರಾಜ್ಯಪಾಲರ ಆದೇಶದಲ್ಲಿಯೂ ಅವರು ಪರಿಶೀಲಿಸಿದ ಕಡತಗಳ ಉಲ್ಲೇಖವಿಲ್ಲ. ಇಂತಹ ಟಿಪ್ಪಣಿಗಳ ಆಧಾರದ ಮೇಲೆ ನಿರ್ಧಾರ ಕೈಗೊಂಡಿದ್ದೇನೆ ಎಂದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಪ್ರತಿಕ್ರಿಯೆ ಬಗ್ಗೆಯೂ ಉಲ್ಲೇಖಿಸಿಲ್ಲ. ಪ್ರಕರಣದಲ್ಲಿ ಸಿದ್ದರಾಮಯ್ಯ ಪಾತ್ರ ಏನು ಎಂಬುದನ್ನು ರಾಜ್ಯಪಾಲರು ತಿಳಿಸಿಲ್ಲ ಎಂದು ವಾದ ಮಂಡಿಸಿದರು.

ಭ್ರಷ್ಟಾಚಾರ ನಿಯಂತ್ರಣಾ ಕಾಯ್ದೆಯ ಸೆಕ್ಷನ್ 17ಎ ಅಡಿ ಪೊಲೀಸ್ ಅಧಿಕಾರಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಬೇಕು. ತನಿಖಾಧಿಕಾರಿಯೇ ತನಿಖೆಯ ಸಂಪೂರ್ಣ ಹಕ್ಕು ಹೊಂದಿರುತ್ತಾನೆ ಎಂದು ಸಿಂಘ್ವಿ ತಿಳಿಸಿದರು. ಇದಕ್ಕೆ ಪೀಠ, ಪೊಲೀಸ್ ಅಧಿಕಾರಿ ದೂರು ಸ್ವೀಕರಿಸಲಿಲ್ಲವೆಂದಾದರೆ ಏನು ಮಾಡಬೇಕು. ಖಾಸಗಿ ದೂರುದಾರರಿಗೆ ಇರುವ ಮಾರ್ಗ ಯಾವುದೆಂದು ಪ್ರಶ್ನಿಸಿತು. ಇದಕ್ಕೆ ಸಿಂಘ್ವಿ ಉತ್ತರಿಸಿ, ಖಾಸಗಿ ದೂರುದಾರರಿಗೆ ಅವಕಾಶ ನೀಡಿದರೆ ಎಲ್ಲ ರೀತಿಯ ಕಾರಣಗಳಿಗೂ ದೂರು ದಾಖಲಿಸುತ್ತಾರೆ ಎಂದರು.
ರಾಜ್ಯಪಾಲರು ಸಹಜ ನ್ಯಾಯ ಪ್ರಕ್ರಿಯೆ ಪಾಲನೆ ಮಾಡಿಲ್ಲ. ಪ್ರಕರಣ ಸಂಬಂಧ ಮೂರು ಮನವಿಗಳು ಬಂದಿವೆ. ಒಂದು ಮನವಿಗೆ ಸಂಬಂಧಿಸಿದಂತೆ ಸಿದ್ದರಾಮಯ್ಯನವರಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ. ಮತ್ತಿಬ್ಬರ ದೂರಿನ ಕುರಿತು ಶೋಕಾಸ್ ನೋಟಿಸ್ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ಆದರೆ, ಯಾವುದೇ ದೂರಿಗೂ ಶೋಕಾಸ್ ನೋಟಿಸ್ ನೀಡಿಲ್ಲದಿದ್ದರೆ ಅಗತ್ಯವಿಲ್ಲವೆನ್ನಬಹುದಿತ್ತು. ಒಬ್ಬರ ದೂರಿಗೆ ನೀಡಿ, ಇಬ್ಬರ ದೂರಿಗೆ ಶೋಕಾಸ್ ನೋಟಿಸ್ ನೀಡಿಲ್ಲ. ಅಲ್ಲದೇ, ಮುಖ್ಯಮಂತ್ರಿಗಳನ್ನು ಹೊರತುಪಡಿಸಿ ಉಳಿದವರಿಗೆ ಪ್ರಾಸಿಕ್ಯೂಷನ್ ಅನುಮತಿ ನೀಡಿಲ್ಲ. ಶಶಿಕಲಾ ಜೊಲ್ಲೆ ಪ್ರಕರಣದಲ್ಲಿ ತಿರಸ್ಕರಿಸಲಾಗಿದೆ, ಮುರುಗೇಶ್ ನಿರಾಣಿ ಪ್ರಕರಣದಲ್ಲಿ ಸ್ಪಷ್ಟನೆ ಕೇಳಿ ಹಿಂತಿರುಗಿಸಲಾಗಿದೆ. ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಪ್ರಕರಣವನ್ನು ಹಿಂತಿರುಗಿಸಲಾಗಿದೆ ಎಂದು ವಿವರಿಸಿದರು.

ಕೆಸರೆ ಗ್ರಾಮದ ಜಮೀನನ್ನು 1992ರಲ್ಲಿ ಮುಡಾಗಾಗಿ ಸ್ವಾಧೀನ ಮಾಡಿಕೊಳ್ಳಲಾಗಿತ್ತು. ದೇವರಾಜು ಎಂಬವರು ಜಮೀನಿನ ಮಾಲೀಕರಾಗಿದ್ದರು. 1993ರಲ್ಲಿ ದೇವರಾಜುವಿನ ಹೆಸರಲ್ಲಿ ಪೌತಿ ಖಾತೆಯಾಗಿದೆ. ನಂತರ ಜಮೀನು ಕಾನೂನಿನ ಪ್ರಕ್ರಿಯೆಯಂತೆ ಡಿನೋಟಿಫೈ ಆಗಿದೆ. 2004ರಲ್ಲಿ ಸಿದ್ದರಾಮಯ್ಯನವರ ಭಾಮೈದನಿಗೆ ಕ್ರಯ ಪತ್ರವಾಗಿದೆ. 2005ರಲ್ಲಿ ಭೂ ಪರಿವರ್ತನೆ ಮಾಡಲಾಗಿದೆ. 2010ರಲ್ಲಿ ಸಿಎಂ ಪತ್ನಿಗೆ ದಾನಪತ್ರವಾಗಿದೆ. ಅಕ್ರಮವಾಗಿದ್ದರೆ 5 ವರ್ಷಗಳ ನಂತರ ಯಾರಾದರೂ ದಾನಪತ್ರ ಮಾಡಿಸಿಕೊಳ್ಳುತ್ತಾರಾ ಎಂದರು. ಅಲ್ಲದೇ, ಮುಡಾ ಜಮೀನು ಬಳಸಿಕೊಂಡಿದ್ದಕ್ಕೆ ಬದಲಿ ಜಮೀನು ನೀಡಿದೆ. ಆದರೆ ಪ್ರಕರಣವನ್ನು ರಾಜಕೀಯಗೊಳಿಸಿದ್ದು, 23 ವರ್ಷಗಳ ದೊಡ್ಡ ಹಗರಣದಂತೆ ಬಿಂಬಿಸಲಾಗಿದೆ. ಇದು ಸಿಎಂ ವಿರುದ್ಧದ ಭ್ರಷ್ಟಾಚಾರ ಪ್ರಕರಣವಲ್ಲ. ಪೇಪರ್ ಮೇಲೆ ಮಾತ್ರ ಮುಡಾ ನಿವೇಶನ ಹಂಚಿಕೆಯಾಗಿದೆ ಎಂದು ವಾದಿಸಿದರು.

ಇನ್ನು, ದೂರುದಾರರ ವಿರುದ್ಧ ವಿವಿಧ ಆರೋಪಗಳಿವೆ. ದೂರುದಾರ ಟಿ.ಜೆ. ಅಬ್ರಹಾಂ ವಿರುದ್ಧ ಬ್ಲಾಕ್ ಮೇಲ್, ಸುಲಿಗೆ, ಮಾನಹಾನಿ ಆರೋಪಗಳಿವೆ. ಸುಪ್ರೀಂಕೋರ್ಟ್ 25 ಲಕ್ಷ ರೂ. ದಂಡ ವಿಧಿಸಿದೆ. ನಿವೇಶನ ಹಂಚಿಕೆ ಬಿಜೆಪಿ ಸರ್ಕಾರದ ಸಮಯದಲ್ಲಾಗಿದೆ. ಆದ್ದರಿಂದ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಯಾವುದೇ ಪಾತ್ರವಿಲ್ಲ. ರಾಜ್ಯಪಾಲರ ಅನುಮತಿ ಕಾನೂನು ಬಾಹಿರವಾಗಿದ್ದು, ಅನುಮತಿಯನ್ನು ರದ್ದುಪಡಿಸಬೇಕು ಎಂದು ಸಿಎಂ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದರು


Share It

You cannot copy content of this page