ಸುದ್ದಿ

ಬಿಜೆಪಿ ಶಾಸಕ ಸುನಿಲ್ ಕುಮಾರ್ ವಿರುದ್ಧದ ಕೇಸ್ ರದ್ದುಪಡಿಸಲು ನಿರಾಕರಿಸಿದ ಹೈಕೋರ್ಟ್

Share It

ಬೆಂಗಳೂರು: ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿದ ಆರೋಪದಡಿ ಬಿಜೆಪಿ ಶಾಸಕ ವಿ. ಸುನಿಲ್ ಕುಮಾರ್ ವಿರುದ್ಧ ದಾಖಲಿಸಿರುವ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಶಾಸಕ ವಿ. ಸುನಿಲ್ ಕುಮಾರ್ ದಾಖಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ನೀಡಿದೆ.

ಅರ್ಜಿ ವಜಾಗೊಳಿಸುವ ವೇಳೆ ನ್ಯಾಯಾಲಯ, ‘ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ತಮ್ಮ ಪಕ್ಷ ಏನು ಮಾಡಿದೆ, ಸರ್ಕಾರ ಏನು ಮಾಡಿದೆ ಎಂಬುದರ ಮೇಲೆ ಅಥವಾ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸುವುದಿಲ್ಲ. ಬದಲಿಗೆ ಒಬ್ಬರು ಮತ್ತೊಬ್ಬರನ್ನು ವಿರೋಧಿಸುವ ಭಾಷಣಗಳಿಂದ ಚುನಾವಣೆ ನಡೆಯುತ್ತಿವೆ. ಈ ರೀತಿಯ ರಾಜಕೀಯ ಕೆಸರೆರಚಾಟ ನಿಲ್ಲಬೇಕು’ ಎಂದು ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ.

ಪ್ರಕರಣದ ಹಿನ್ನೆಲೆ: ಕಳೆದ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಕಾರ್ಕಳ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸುನಿಲ್‌ ಕುಮಾರ್‌ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಪ್ರಮೋದ್‌ ಮುತಾಲಿಕ್‌ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಸುನಿಲ್‌ ಕುಮಾರ್‌ ಗೆಲುವು ಸಾಧಿಸಿದ್ದರು. ಚುನಾವಣಾ ಫಲಿತಾಂಶದ ನಂತರ 2023ರ ಮೇ 14ರಂದು ಕಾರ್ಕಳ ಬಂಡಿಮಠ ಬಸ್‌ ನಿಲ್ದಾಣ ಬಳಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಸುನೀಲ್‌ ಕುಮಾರ್‌, ಪ್ರಮೋದ್ ಮುತಾಲಿಕ್ ವಿರುದ್ಧ ಹೇಳಿಕೆ ನೀಡಿದ್ದರು.

ಆ ನಂತರ ಪ್ರಮೋದ್‌ ಮುತಾಲಿಕ್‌ ಅವರು ಸುನೀಲ್‌ ಕುಮಾರ್‌ ನನ್ನ ವಿರುದ್ಧ ಮಾನಹಾನಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ 2023ರ ಸೆಪ್ಟೆಂಬರ್‌ 7ರಂದು ಬೆಂಗಳೂರಿನ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ವಿಚಾರಣಾ ನ್ಯಾಯಾಲಯ ಐಪಿಸಿ ಸೆಕ್ಷನ್ 499 ಮತ್ತು 500ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಿಗಾಗಿ ಪ್ರಾಸಿಕ್ಯೂಷನ್ಗೆ ಮುಂದಾಗಿತ್ತು. ಇದನ್ನು ರದ್ದುಗೊಳಿಸುವಂತೆ ಕೋರಿ ಸುನಿಲ್ ಕುಮಾರ್ ಹೈಕೋರ್ಟ್ ಮೊರೆ ಹೋಗಿದ್ದರು.
(WP 19821/2024)
ಮೂಲ: LAw TIME


Share It

You cannot copy content of this page