ಸುದ್ದಿ

ವಕೀಲರ ಭಾವನೆಗಳಿಗೆ ಧಕ್ಕೆ: ತಾತ್ಕಾಲಿಕವಾಗಿ ಲೈವ್ ಸ್ಟ್ರೀಮಿಂಗ್ ನಿಲ್ಲಿಸಲು ವಕೀಲರ ಸಂಘ ಮನವಿ

Share It

ಬೆಂಗಳೂರು: ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರು ಪ್ರಕರಣವೊಂದರ ವಿಚಾರಣೆ ವೇಳೆ ವ್ಯಕ್ತಪಡಿಸಿದ ಅಭಿಪ್ರಾಯವು ವಿವಾದಕ್ಕೀಡಾದ ಹಿನ್ನೆಲೆಯಲ್ಲಿ ಬೆಂಗಳೂರು ವಕೀಲರ ಸಂಘ, ಕೆಲ ದಿನಗಳ ಮಟ್ಟಿಗೆ ಹೈಕೋರ್ಟ್‌ ಲೈವ್‌ ಸ್ಟ್ರೀಮಿಂಗ್‌ ಅನ್ನು ನಿರ್ಬಂಧಿಸುವಂತೆ ಕೋರಿ ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಅವರಿಗೆ ಪತ್ರ ಬರೆದಿದೆ.

ಎಎಬಿ ಅಧ್ಯಕ್ಷರಾದ ವಿವೇಕ್‌ ಸುಬ್ಬಾರೆಡ್ಡಿ, ಕಾರ್ಯದರ್ಶಿ ಟಿ.ಜಿ ರವಿ ಮತ್ತು ಖಜಾಂಚಿ ಎಂ.ಟಿ ಹರೀಶ್‌ ಅವರು ಸಿಜೆ ಅವರಿಗೆ ಪತ್ರ ಬರೆದಿದ್ದು, ಅದರಲ್ಲಿ, ಇತ್ತೀಚೆಗೆ ಲೈವ್‌ ಸ್ಟ್ರೀಮಿಂಗ್‌ ಸಂದರ್ಭದಲ್ಲಿ ವಿಚಾರಣೆಯ ವೇಳೆ ನ್ಯಾಯಮೂರ್ತಿಯೊಬ್ಬರು ವ್ಯಕ್ತಪಡಿಸಿದ ವಿವಾದಾತ್ಮಕ ಅಭಿಪ್ರಾಯವು ರಾಷ್ಟ್ರದಾದ್ಯಂತ ಸುದ್ದಿಯಾಗಿದೆ. ನ್ಯಾ. ಶ್ರೀಶಾನಂದ ಅವರು ವ್ಯಕ್ತಪಡಿಸಿದ ಅಭಿಪ್ರಾಯವು ಗಂಭೀರ ವಿವಾದ ಸೃಷ್ಟಿಸಿದೆ. ಜತೆಗೆ, ನ್ಯಾಯಮೂರ್ತಿಗಳ ಹೇಳಿಕೆಯು ವೈರಲ್‌ ಆಗಿದೆ. ಇದರಿಂದ ವಕೀಲ ವೃತ್ತಿಯನ್ನು ಶ್ರೇಷ್ಠವೆಂದು ಪರಿಗಣಿಸಿರುವ ಹಿರಿಯ-ಕಿರಿಯ ವಕೀಲರ ಭಾವನೆಗಳಿಗೆ ನೋವುಂಟಾಗಿದೆ.

ಮಹಿಳಾ ವಕೀಲೆಯೊಬ್ಬರನ್ನು ಕುರಿತು ನ್ಯಾಯಮೂರ್ತಿಗಳು ಇತ್ತೀಚೆಗೆ ನೀಡಿರುವ ಹೇಳಿಕೆಯು ರಾಷ್ಟ್ರದ ಗಮನ ಸೆಳೆದಿದೆ. ಅಲ್ಲದೇ, ವಕೀಲರು ಅದರಲ್ಲೂ ಮಹಿಳಾ ವಕೀಲರನ್ನು ನ್ಯಾಯಮೂರ್ತಿಗಳು ನಡೆಸಿಕೊಳ್ಳುತ್ತಿರುವ ರೀತಿ ಕುರಿತಂತೆ ಚರ್ಚೆ ಮುನ್ನೆಲೆಗೆ ಬಂದಿದೆ. ಹೀಗಾಗಿ, ಮುಕ್ತ ನ್ಯಾಯಾಲಯದಲ್ಲಿ ವ್ಯಕ್ತಪಡಿಸುವಂತಹ ಅಭಿಪ್ರಾಯಗಳಿಗೆ ಸಂಬಂಧಿಸಿದಂತೆ ಸಂವೇದನಾಶೀಲತೆ ಮೂಡಿಸುವವರೆಗೆ ನ್ಯಾಯಾಲಯಗಳ ಲೈವ್‌ ಸ್ಟ್ರೀಮಿಂಗ್‌ ಅನ್ನು ಸಂಪೂರ್ಣವಾಗಿ ನಿರ್ಬಂಧಿಸಬೇಕಿದೆ. ಇಲ್ಲದಿದಲ್ಲಿ ಸಾರ್ವಜನಿಕರ ಮನಸ್ಸಿನಲ್ಲಿ ನ್ಯಾಯಾಲಯಗಳ ಬಗ್ಗೆ ಇರುವ ಭಾವನೆಗೆ ಧಕ್ಕೆಯಾಗಲಿದೆ. ಆದ್ದರಿಂದ ಲೈವ್ ಸ್ಟ್ರೀಮಿಂಗ್ ನಿರ್ಬಂಧಿಸುವ ಕುರಿತಂತೆ ತುರ್ತಾಗಿ ಕ್ರಮಕೈಗೊಳ್ಳಬೇಕೆಂದು ಪತ್ರದಲ್ಲಿ ಕೋರಲಾಗಿದೆ.

ಅಲ್ಲದೇ, ನ್ಯಾಯಮೂರ್ತಿ ಶ್ರೀಶಾನಂದ ಅವರು ಉತ್ತಮ ತೀರ್ಪುಗಳನ್ನು ನೀಡಿದ್ದು, ಪ್ರಾಮಾಣಿಕತೆಗೆ ಹೆಸರಾಗಿದ್ದಾರೆ. ನ್ಯಾಯಮೂರ್ತಿಗಳ ಆಕ್ಷೇಪಾರ್ಹವಾದ ಹೇಳಿಕೆಗಳಿಂದ ಅವರು ಮಾಡಿರುವ ಉತ್ತಮ ಕೆಲಸಗಳಿಗೂ ಅಪಚಾರ ಉಂಟಾಗುತ್ತಿದೆ. ಕೆಲವು ಸಂದರ್ಭದಲ್ಲಿ ಅವರು ವ್ಯಕ್ತಪಡಿಸಿರುವ ಅಭಿಪ್ರಾಯ ಮತ್ತು ಮೂದಲಿಕೆಗಳು ಅಪ್ರಸ್ತುತವಾಗಿವೆ ಎಂದು ಎಎಬಿ ಪತ್ರದಲ್ಲಿ ಹೇಳಿದೆ.

ಮೂಲ: LAW TIME


Share It

You cannot copy content of this page