ನ್ಯಾಯಾಲಯದ ವಿಚಾರಣೆಯ ಸಂದರ್ಭದಲ್ಲಿ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನ ನ್ಯಾಯಮೂರ್ತಿ ವೇದವ್ಯಾಸಾಚಾರ್ ಶ್ರೀಶಾನಂದ ಅವರು ವಿಷಾದ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ತಮ್ಮ ಮಾತುಗಳು ಉದ್ದೇಶ ಪೂರ್ವಕವಲ್ಲ ಮತ್ತು ಸಮಾಜದ ಯಾವುದೇ ವ್ಯಕ್ತಿ ಅಥವಾ ವರ್ಗವನ್ನು ನೋಯಿಸಲು ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಿನ್ನೆ ಮಧ್ಯಾಹ್ನ 2.30ಕ್ಕೆ ಕಲಾಪ ಆರಂಭಿಸಿದ ವೇಳೆ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರು ಬೆಂಗಳೂರಿನ ವಕೀಲರ ಸಂಘದ (ಎಎಬಿ) ಕೆಲವು ಪದಾಧಿಕಾರಿಗಳ ಸಮ್ಮುಖದಲ್ಲಿ ತೆರೆದ ನ್ಯಾಯಾಲಯದಲ್ಲಿ ಈ ಕುರಿತ ಹೇಳಿಕೆಯನ್ನು ಓದಿದ್ದಾರೆ. ಕಲಾಪದ ವೇಳೆ ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಸಂದರ್ಭಕ್ಕೆ ಹೊರತಾಗಿ ವರದಿ ಮಾಡಲಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಜತೆಗೆ, ಮುಂದೆ ಇಂತಹ ಯಾವುದೇ ಹೇಳಿಕೆ ನೀಡುವುದಿಲ್ಲ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ ಎಂದು ನ್ಯಾಯಾಲಯದಲ್ಲಿ ಹಾಜರಿದ್ದ ಹಿರಿಯ ವಕೀಲರು ತಿಳಿಸಿದ್ದಾರೆ.
ಇತ್ತೀಚೆಗೆ, ಹೈಕೋರ್ಟ್‌ನ ನ್ಯಾಯಮೂರ್ತಿ ವೇದವ್ಯಾಸಾಚಾರ್ ಶ್ರೀಶಾನಂದ ಅವರ ಎರಡು ವೀಡಿಯೊ ತುಣುಕುಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ಅವುಗಳಲ್ಲಿ ಒಂದು ವಿಡಿಯೋದಲ್ಲಿ ಅವರು ಬೆಂಗಳೂರಿನ ಗೋರಿಪಾಳ್ಯ ಪ್ರದೇಶವನ್ನು ಪಾಕಿಸ್ತಾನಕ್ಕೆ ಹೋಲಿಸಿರುವುದು ಹಾಗೂ ಮತ್ತೊಂದು ವೀಡಿಯೊದಲ್ಲಿ ಮಹಿಳಾ ವಕೀಲರಿಗೆ ಮುಜುಗರವಾಗುವಂತೆ ಹೇಳಿಕೆ ನೀಡಿರುವುದು ಕಂಡುಬಂದಿದೆ.
ಈ ಹಿನ್ನೆಲೆಯಲ್ಲಿ, ಸೆಪ್ಟೆಂಬರ್ 20 ರಂದು ಸುಪ್ರೀಂಕೋರ್ಟ್ ನ್ಯಾ.ಶ್ರೀಶಾನಂದ ಅವರು ಮಾಡಿದ ವಿವಾದಾತ್ಮಕ ಕಾಮೆಂಟ್‌ಗಳನ್ನು ಒಳಗೊಂಡಿರುವ ವೀಡಿಯೊ ಕ್ಲಿಪ್‌ಗಳನ್ನು ಆಧರಿಸಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ಈ ಕುರಿತಂತೆ ಹೈಕೋರ್ಟ್‌ನಿಂದ ವರದಿ ಸಲ್ಲಿಸಲು ಸೂಚಿಸಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಸೆಪ್ಟೆಂಬರ್ 25 ರಂದು ನಡೆಯಲಿದೆ.
ಇನ್ನು ಈ ಬೆಳವಣಿಗೆಯ ನಂತರ, ಹೈಕೋರ್ಟ್ ಕಲಾಪಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಬಳಸದಂತೆ ಹೈಕೋರ್ಟ್ ನಿರ್ಬಂಧ ವಿಧಿಸಿದೆ.
ಮೂಲ: LAW TIME