ಸುದ್ದಿ

ನುಡಿನಮನ: ದಣಿವರಿಯದ ರೈತ ಹೋರಾಟಗಾರ ಎಸ್.ಬಿ.ಪುಟ್ಟಸ್ವಾಮಿಗೌಡ ಇನ್ನಿಲ್ಲ

Share It

ಕಳೆದ ನಾಲ್ಕು ದಶಕಗಳಿಂದ ರೈತ ಹೋರಾಟವನ್ನೆ ಬದುಕಾಗಿಸಿಕೊಂಡಿದ್ದ, ಮಂಡ್ಯ ಜಿಲ್ಲಾ ರೈತ ಚಳವಳಿಯನ್ನು ತಳಮಟ್ಟದಿಂದ ಸಂಘಟಿಸಿದ ಮುಂಚೂಣಿ ರೈತ ಹೋರಾಟಗಾರರಲ್ಲಿ ಒಬ್ಬರಾದ ಮದ್ದೂರು ತಾಲ್ಲೂಕು ಸಾದೊಳಲು ಗ್ರಾಮದ  ಎಸ್.ಬಿ.ಪುಟ್ಟಸ್ವಾಮಿಗೌಡ (71) ಅವರು ಹೋರಾಟದ ಬದುಕಿಗೆ ವಿದಾಯ ಹೇಳಿದ್ದಾರೆ.

ಮೈಸೂರಿನ ಡಿ.ಬನುಮಯ್ಯ ಕಾಲೇಜಿನಲ್ಲಿ ಬಿ.ಕಾಂ ಪದವಿ ಓದುವಾಗಲೇ ವಿದ್ಯಾರ್ಥಿ ನಾಯಕರಾಗಿ ಗುರ್ತಿಸಿಕೊಂಡಿದ್ದ ಎಸ್.ಬಿ.ಪುಟ್ಟಸ್ವಾಮಿಗೌಡ ಅವರು  ನಂತರ  ಪ್ರೊ.ಎಂ.ಡಿ.ನಂಜುಂಡಸ್ವಾಮಿ, ಎನ್.ಡಿ.ಸುಂದರೇಶ್ ಅವರುಗಳ ಸಂಪರ್ಕಕ್ಕೆ ಬಂದು 80ರ ದಶಕದಲ್ಲಿ ಮಂಡ್ಯ ಜಿಲ್ಲೆಯಲ್ಲಿ ರೈತ ಸಂಘವನ್ನು ಕಟ್ಟಿ ಬೆಳೆಸಿದವರಲ್ಲಿ ಪ್ರಮುಖರು.

ರೈತ ಸಂಘಟನೆಯ ಆರಂಭದ ದಿನಗಳಿಂದಲೂ ಮಂಡ್ಯ ಜಿಲ್ಲೆಯಲ್ಲಿ ಕಾರ್ಯಕರ್ತರನ್ನು ಸಂಘಟಿಸಿ ರೈತಸಂಘವನ್ನು ಕಟ್ಟಿ, ಬೆಳೆಸಿದ ಮುಂಚೂಣಿ ನಾಯಕರಲ್ಲಿ ಪ್ರಮುಖರಾಗಿರುವ  ಇವರು ಅಂದಿನಿಂದ ಇಂದಿನವರೆಗೂ ಅದೇ ಸಂಘಟನಾ ಬದ್ದತೆ, ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡಿದ್ದರು.

ನಿರಂತರ ನಲವತ್ತು ವರ್ಷಗಳ ರೈತ ಸಂಘಟನೆಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಎಸ್.ಬಿ.ಪುಟ್ಟಸ್ವಾಮಿಗೌಡ ಅವರು ಸುನಂದ ಜಯರಾಂ,ಕೆ.ಎಸ್ ಪುಟ್ಟಣ್ಣಯ್ಯರಂತಹ ಹಲವು  ನಾಯಕರ ಜೊತೆಗೂಡಿ ಮಂಡ್ಯ ಜಿಲ್ಲೆಯ ರೈತ ಸಂಘಟನೆಯನ್ನು ಅದರಾಚೆಗಿನ ಜನಪರ ಚಳವಳಿಯನ್ನು ಬಲಿಷ್ಠಗೊಳಿಸಿದರು.

ರೈತ ಸಂಘದ ಕಾರ್ಯಕರ್ತರಿಗೆ  ಆತ್ಮೀಯ ಒಡನಾಡಿಯಾಗಿದ್ದ, ಕಾರ್ಯಕರ್ತರ ಕಷ್ಟಗಳಿಗೆ ಮಿಡಿಯುತ್ತಿದ್ದ ಅವರ ಮಾನವೀಯ ಕಾಳಜಿ ಅಪಾರವಾದದು. ಜೊತೆಗೆ ತನ್ನ ಪರಿವಾರದ ಬಗ್ಗೆ, ಹುಟ್ಟೂರಿನ ಬಗೆಗೆ ಅತೀವ ಪ್ರೀತಿಯನ್ನಿಟ್ಟುಕೊಂಡಿದ್ದ ಅವರು ಎಲ್ಲರಿಗೂ ಮಾರ್ಗದರ್ಶಕರಾಗಿದ್ದರು. ಹಾಗಾಗಿ ಕಾರ್ಯಕರ್ತರು ಯಾವುದೇ ಹೋರಾಟಕ್ಕೂ ಎಸ್.ಬಿ.ಪುಟ್ಟಸ್ವಾಮಿಗೌಡ ಅವರ ಮುಂದಾಳತ್ವವನ್ನು ಅಪೇಕ್ಷಿಸುತ್ತಿದ್ದರು.

ರೈತಾಪಿ ಬದುಕನ್ನು ಅದಮ್ಯವಾಗಿ ಪ್ರೀತಿಸುತ್ತಿದ್ದ ಇವರು ಸ್ವತಃ ರೈತರಾಗಿ ಸುಭಾಷ್ ಪಾಳೇಕರ್ ಅವರ ನೈಸರ್ಗಿಕ ಕೃಷಿಯನ್ನು ಮಾಡಿ ಯಶಸ್ವಿಯಾಗಿದ್ದರು, ಜೊತೆಗೆ ತಮ್ಮ ಜಮೀನಿನಲ್ಲಿ ಎಲ್ಲಾ ಬಗೆಯ ಗಿಡ, ಮರಗಳನ್ನು ಬೆಳೆಸಿ ಸಂರಕ್ಷಿಸುವ ಮೂಲಕ ಪರಿಸರ ಕಾಳಜಿಯನ್ನು ಉಸಿರಾಗಿಸಿಕೊಂಡಿದ್ದರು ಎಂದರೆ ತಪ್ಪಾಗಲಾರದು.

ನಾಲ್ಕು ದಶಕಗಳ ಅವರ ದಣಿವರಿಯದ ಹೋರಾಟಗಳಲ್ಲಿ ಕಾವೇರಿ ಹೋರಾಟ, ಮಂಡ್ಯ ಜೀವನಾಡಿ ಮೈಶುಗರ್ ಕಾರ್ಖಾನೆ ಉಳಿವಿಗಾಗಿ ಹೋರಾಟ, ಕಬ್ಬಿನ ದರ ಹೆಚ್ಚಳಕ್ಕಾಗಿ ಹೋರಾಟ, ಬೆಂಬಲ ಬೆಲೆ ಶಾಸನಕ್ಕಾಗಿ ಹೋರಾಟ, ಹಾಲಿನ ದರ ಹೆಚ್ಚಳ ಹೋರಾಟ ಸೇರಿದಂತೆ ಹತ್ತು ಹಲವು ಜನಪರ ಹೋರಾಟಗಳನ್ನು ರೂಪಿಸಿ ಯಶಸ್ವಿಯಾಗಿ ಮುನ್ನೆಡಿಸಿದ್ದಾರೆ.

ಜಿಲ್ಲಾ  ರೈತ ಚಳುವಳಿಗೆ ಧುಮುಕಿದ ಆರಂಭದಿಂದ ಇಂದಿನವರೆಗೂ ರಾಜಕಾರಣಿಗಳ, ಅಧಿಕಾರಿಗಳ, ಪೊಲೀಸರ ಯಾವುದೇ ಮುಲಾಜಿಗೂ ಬಗ್ಗದೆ, ರಾಜಿರಹಿತ ದಣಿವರಿಯದ ಹೋರಾಟಗಾರರಾಗಿದ್ದ ಎಸ್‌.ಬಿ.ಪುಟ್ಟಸ್ವಾಮಿಗೌಡ ಅವರ ಅಗಲಿಕೆ ರೈತ, ಜನಪರ ಚಳುವಳಿಗೆ ತುಂಬಲಾರದ ನಷ್ಟ.

ಮುರಳೀಧರ.ಆರ್
ಈ – ನ್ಯೂಸ್ ಕನ್ನಡ


Share It

You cannot copy content of this page