ಸುದ್ದಿ

ಅಪಘಾತಕ್ಕೊಳಗಾದವರು ಚಿಕಿತ್ಸೆ ವೇಳೆ ಹೃದಯಾಘಾತದಿಂದ ಮೃತಪಟ್ಟರೂ ಇನ್ಶುರೆನ್ಸ್ ಕಂಪನಿ ಪರಿಹಾರ ಕೊಡಬೇಕು: ಹೈಕೋರ್ಟ್

Share It

ಬೆಂಗಳೂರು: ಅಪಘಾತದಲ್ಲಿ ಗಾಯಗೊಂಡವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಹೃದಯಾಘಾತದಿಂದ ಮೃತಪಟ್ಟರೂ ಅವರ ಕುಟುಂಬಕ್ಕೆ ಇನ್ಶುರೆನ್ಸ್ ಕಂಪನಿ ಪರಿಹಾರ ಕೊಡಬೇಕು. ಸಾವಿಗೂ ಅಪಘಾತಕ್ಕೂ ಸಂಬಂಧವಿಲ್ಲ ಎಂದು ಹೇಳಲಾಗದು ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ಮೋಟಾರು ವಾಹನ ಅಪಘಾತದಲ್ಲಿ ಪತಿ ಮೃತಪಟ್ಟ ಹಿನ್ನೆಲೆಯಲ್ಲಿ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 173(1) ಅನ್ವಯ ಪರಿಹಾರದ ಮೊತ್ತ ಹೆಚ್ಚಿಸಲು ಕೋರಿ ಪತ್ನಿ ಹಾಗೂ ನ್ಯಾಯಮಂಡಳಿ ಹೊರಡಿಸಿದ್ದ ಆದೇಶ ಪ್ರಶ್ನಿಸಿ ವಿಮಾ ಕಂಪನಿ ಸಲ್ಲಿಸಿದ್ದ 2 ಪ್ರತ್ಯೇಕ ಮೇಲ್ಮನವಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಟಿ.ಜಿ. ಶಿವಶಂಕರೇಗೌಡ ಅವರಿದ್ದ ಏಕಸದಸ್ಯ ಪೀಠ ಮೇಲಿನಂತೆ ಆದೇಶ ನೀಡಿದೆ.

ವಾದ- ಪ್ರತಿವಾದ ಆಲಿಸಿದ ನ್ಯಾಯಪೀಠ, ಅಪಘಾತಕ್ಕೊಳಗಾದ ವ್ಯಕ್ತಿಯೂ ಚಿಕಿತ್ಸೆಯ ಯಾವುದೇ ಹಂತದಲ್ಲೂ ಆತನ ಆರೋಗ್ಯದಲ್ಲಿ ಚೇತರಿಕೆ ಕಂಡಿಲ್ಲ ಎನ್ನುವುದು ವೈದ್ಯಕೀಯ ದಾಖಲೆಗಳಿಂದ ತಿಳಿಯುತ್ತದೆ. ಹೀಗಿರುವಾಗ ಹೃದಯಸ್ತಂಭನದಿಂದ ಸಾವನಪ್ಪಿದ್ದಾರೆ ಎನ್ನುವ ಅಂಶ ಮರಣೋತ್ತರ ಪರೀಕ್ಷೆಯಲ್ಲಿ ಉಲ್ಲೇಖಿಸಿದ್ದರು ಅವರ ಸಾವಿಗೂ, ಅಪಘಾತಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪರಿಹಾರ ನೀಡದೆ ಜಾರಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಅಪಘಾತದ ಸಮಯದಲ್ಲಿ ಮೃತ ವ್ಯಕ್ತಿ ವಾಹನ ಪರವಾನಗಿ ಹಾಗೂ ಫಿಟ್‌ನೆಸ್ ಪ್ರಮಾಣಪತ್ರ ಹೊಂದಿರಲಿಲ್ಲ. ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 149(2)(ಎ)(ಐ)(ಎ) ಅನ್ವಯ ನಿಯಮ ಉಲ್ಲಂಘನೆಯಾಗಿದೆ. ಈ ಬಗ್ಗೆ ಮೇಲ್ಮವಿಯಲ್ಲಿ ವಿಮಾ ಕಂಪನಿ ಎತ್ತಿದ ಆಕ್ಷೇಪವನ್ನು ನ್ಯಾಯಾಲಯ ಪುರಸ್ಕರಿಸಿದೆ.

ನ್ಯಾಯಾಲಯ ಹೇಳಿದ್ದೇನು: ಪತ್ನಿಯೂ ಪತಿಯ ಆದಾಯದ ಮೇಲೆ ಅವಲಂಬಿತಳಾಗಿದ್ದು, ವಿಮಾ ಮೊತ್ತದಲ್ಲಿ 1/3 ಮಾತ್ರ ಕಡಿತಗೊಳಿಸುವಂತೆ ನ್ಯಾಯಮಂಡಳಿ ವಿಧಿಸಿದ ಆದೇಶ ಸಮರ್ಪಕವಾಗಿದೆ

ಮೃತರ ವೈದ್ಯಕೀಯ ವೆಚ್ಚ 4,04,765 ರೂ. ಸೇರಿ ಇನ್ನಿತರ ಎಲ್ಲ ವೆಚ್ಚ ಸೇರಿಸಿ ವಿಮಾ ಕಂಪನಿ 13,88,209 ಬದಲಿಗೆ ಶೇ.6 ರ ಬಡ್ಡಿಯೊಂದಿಗೆ 13,44,209 ಲಕ್ಷ ರೂ. ಪಾವತಿಸಬೇಕು.ಆದೇಶ ಪ್ರತಿ ಸಿಕ್ಕಿದ 8 ವಾರಗಳಲ್ಲಿ ಪೂರ್ಣ ಮೊತ್ತ ಮೃತನ ಕುಟುಂಬಕ್ಕೆ ಪಾವತಿಸಬೇಕು ಎಂದು ನ್ಯಾಯಪೀಠ ಸೂಚಿಸಿದೆ.

ಏನಿದು ಪ್ರಕರಣ?: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಬೋಡನಹೊಸಹಳ್ಳಿ ಗ್ರಾಮದ ನಂದೀಶಪ್ಪ(55) ಮೃತರು. 2013ರ ಜೂ. 17ರಂದು ಮೋಟಾರು ವಾಹನದಲ್ಲಿ ಮನೆಗೆ ಹಿಂದಿರುಗುವಾಗ ಹೊಸಕೋಟೆ ಸಮೀಪದ ಚಿಕ್ಕತಿರುಪತಿ ರಸ್ತೆ ಬಳಿ ಸರಕು ಸಾಗಣೆ ವಾಹನ ಡಿಕ್ಕಿ ಹೊಡೆದಿತ್ತು. ನಂದೀಶಪ್ಪನ ತಲೆಗೆ ತೀವ್ರ ಗಾಯವಾಗಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. 2013ರ ಜು.31ರಂದು ಅವರು ಸಾವನಪ್ಪಿದ್ದರು. ಮೃತರ ಕುಟಂಬಸ್ಥರು ಮೋಟಾರು ಅಪಘಾತ ಕ್ಷೇಮ್ ಟ್ರಿಬ್ಯೂನಲ್ನಿಂದ (ಎಂಎಸಿಟಿ) ಪರಿಹಾರವಾಗಿ ₹30 ಲಕ್ಷ ಪಾವತಿಸುವಂತೆ ಮನವಿ ಮಾಡಿದ್ದರು. ಇದಕ್ಕೆ ವಿಮಾ ಕಂಪನಿ ವಿರೋಧ ವ್ಯಕ್ತಪಡಿಸಿತ್ತು. ವಿಚಾರಣೆ ನಡೆಸಿದ ನ್ಯಾಯಮಂಡಳಿ ವರ್ಷಕ್ಕೆ ಶೇ.9 ಬಡ್ಡಿಯೊಂದಿಗೆ 13,88,209 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಸೂಚಿಸಿತ್ತು.


Share It

You cannot copy content of this page