ಕಾನೂನು ಸಮುದಾಯದಲ್ಲಿ ಪ್ರಾಮಾಣಿಕತೆ ಮತ್ತು ವೃತ್ತಿಪರತೆ ಮತ್ತು ಸಮಗ್ರತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ವಕೀಲರ ಪರಿಷತ್ತು ನಿರಂತರವಾಗಿ ಶ್ರಮಿಸುತ್ತಿದೆ. ಅದರಂತೆ ದೆಹಲಿ ರಾಜ್ಯದಲ್ಲಿ ಕಾನೂನು ವೃತ್ತಿಯಲ್ಲಿ ತೊಡಗಿಸಿಕೊಂಡ ನಕಲಿ ವಕೀಲರ ವಿರುದ್ಧ ಬಿಸಿಐ ಕ್ರಮಕೈಗೊಂಡಿದೆ.
2019ರಿಂದ 2024ರ ನಡುವಿನ ಅವಧಿಯಲ್ಲಿ 107 ನಕಲಿ ವಕೀಲರನ್ನು ವಕೀಲರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಭಾರತೀಯ ವಕೀಲರ ಮಂಡಳಿ(ಬಿಸಿಐ) ತನ್ನ ಪ್ರಕಟಣೆಯಲ್ಲಿ ತಿಳಿಸಿದೆ
ಬಿಸಿಐ ಪ್ರಮಾಣಪತ್ರ ಮತ್ತು ನಿಯಮಾವಳಿ- 2015ರ ನಿಯಮ 32ರ ಅಡಿಯಲ್ಲಿ ನಕಲಿ ವಕೀಲರು ಮತ್ತು ಕಾನೂನು ಪ್ರಾಕ್ಟಿಸ್ ಸ್ಥಳ ಕುರಿತ ಮಾನದಂಡ ಪಾಲಿಸದವರನ್ನು ತೆಗೆದುಹಾಕುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಅಜಯ್ ಶಂಕರ್ ಶ್ರೀವಾತ್ಸವ Vs ಬಾರ್ ಕೌನ್ಸಿಲ್ ಆಫ್ ಇಂಡಿಯಾ ಪ್ರಕರಣದಲ್ಲಿ ಮಾನ್ಯ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನದಂತೆ ಬಿಸಿಐ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿದ್ದು, ಅನುಮಾನ ಬಂದ ಪ್ರಕರಣಗಳ ಗಂಭೀರ ಪರಿಶೀಲನೆಯಲ್ಲಿ ಹಲವು ತೊಟ್ಟಿ ದಾಖಲೆಗಳನ್ನು ನೀಡಿರುವ ವಿಷಯ ಬಯಲಾಗಿದೆ. ಹಲವು ವಕೀಲರು ತಮ್ಮ ವಿರುದ್ಧದ ಕಾನೂನು ಕ್ರಮವನ್ನು ತಪ್ಪಿಸಲು ತಮ್ಮ ಸನದು ಪತ್ರವನ್ನು ವಾಪಸ್ ನೀಡಿದ್ದು, ವಕೀಲ ವೃತ್ತಿಯಿಂದ ಹಿಂದೆ ಸರಿದಿದ್ದಾರೆ.
ಇದೇ ರೀತಿ, ಪ್ರತಿ ರಾಜ್ಯಗಳಲ್ಲೂ ಆಯಾ ರಾಜ್ಯದ ವಕೀಲರ ಪರಿಷತ್ತುಗಳು ನಕಲಿ ವಕೀಲರ ವಿರುದ್ಧ ಕಾನೂನು ಕ್ರಮವನ್ನು ಮುಂದುವರಿಸುವಂತೆ ಭಾರತೀಯ ವಕೀಲರ ಮಂಡಳಿ ನಿರ್ದೇಶನ ನೀಡಿದೆ.