ಕೃಷಿ ಸಂಬಂಧಿತ ಸಮಗ್ರ ಮಾಹಿತಿಗಾಗಿ ಕೃಷಿ ಕೇಂದ್ರ ಸ್ಥಾಪಿಸಿದ ವಿದ್ಯಾರ್ಥಿಗಳು
ಹಾಸನ: ತಾಲೂಕಿನ ದುದ್ದ ಹೋಬಳಿಯ ಕಬ್ಬಳಿಯಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ತಂಗಿರುವ ಹಾಸನದ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮದ ರೈತರಿಗೆ ಕೃಷಿ ಸಂಬಂಧಿತ ಮಾಹಿತಿಯನ್ನು ನೀಡಲು ‘ಕೃಷಿ ಇತ್ಯುಕ್ತ’ ಎಂಬ ಹೆಸರಿನಲ್ಲಿ ಕೃಷಿ ಮಾಹಿತಿ ಕೇಂದ್ರವನ್ನು ಉದ್ಘಾಟನೆ ಮಾಡಿದರು.
ಈ ಮಾಹಿತಿ ಕೇಂದ್ರದಲ್ಲಿ ಗ್ರಾಮದ ಮಾಹಿತಿ ಒಳಗೊಂಡಂತೆ ಕೃ.ವಿ.ವಿ ಬೆಂಗಳೂರು ಮತ್ತು ಕೃಷಿ ಮಹಾವಿದ್ಯಾಲಯದ ಮಾಹಿತಿ,ನಮ್ಮ ರಾಜ್ಯದ ಕೃಷಿ ವಲಯಗಳು,ಒಂದು ಜಿಲ್ಲೆ ಒಂದು ಉತ್ಪನ್ನ ಕುರಿತು ಮಾಹಿತಿ ಜೊತೆಗೆ ಮಣ್ಣು ಪರೀಕ್ಷೆ,ಬೀಜೋಪಚಾರ, ನೂತನ ತಳಿಗಳ ವಿವರ,ಹಸಿರು ಮನೆ, ಕೊಳವೆಬಾವಿ ಮರುಪೂರಣೆ, ಜಲನಯನ ಮಾದರಿ,ಸಮಗ್ರ ಕೃಷಿ ಪದ್ಧತಿ,ಎರೆಗೊಬ್ಬರ,ಅಣಬೆ ಬೇಸಾಯ, ವಿವಿಧ ಬೆಳೆಗಳ ಸಂಪೂರ್ಣ ಮಾಹಿತಿ, ಜೇನು ಕೃಷಿ,ಸಮಗ್ರ ಕೀಟ ಮತ್ತು ರೋಗ ನಿರ್ವಹಣೆ,ಪಶುಗಳ ರೋಗ ನಿರ್ವಹಣೆ, ಆಹಾರ ತಂತ್ರಜ್ಞಾನ,ಜೈವಿಕ ತಂತ್ರಜ್ಞಾನ, ವಿವಿಧ ಯೋಜನೆಗಳು,ಕೃಷಿ ಸಂಬಂಧಿತ ಆಪ್ ಗಳು,ಜಾಲತಾಣಗಳು ಮತ್ತು ನಿಯತಕಾಲಿಕಗಳ ಮಾಹಿತಿ ಮತ್ತು ಹಲವಾರು ಮಾದರಿಗಳಿದ್ದು ರೈತರಿಗೆ ಎಲ್ಲಾ ರೀತಿಯ ಮಾಹಿತಿಯು ಒಂದೇ ಕಡೆ ಸಿಗುವುದು.
ಹಾಸನದ ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಮುನಿಸ್ವಾಮಿ ಗೌಡ ಕೆ.ಎನ್ ರವರು ಕೃಷಿ ಮಾಹಿತಿ ಕೇಂದ್ರವನ್ನು ಅಧಿಕೃತವಾಗಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ರೈತರಿಗೆ ಬೇಕಾಗುವ ಕೃಷಿ ಸಂಬಂಧಿತ ಮಾಹಿತಿಯನ್ನು ತಿಳಿಸಲು ವಿದ್ಯಾರ್ಥಿಗಳು ಈ ಕೇಂದ್ರವನ್ನು ಸ್ಥಾಪನೆ ಮಾಡಿದ್ದು,ರೈತರಿಗೆ ಯಾವುದೇ ರೀತಿಯ ಮಾಹಿತಿ ಬೇಕಿದ್ದಲ್ಲಿ ಯಾವಾಗ ಬೇಕಾದರೂ ಇಲ್ಲಿಗೆ ಬಂದು ವಿದ್ಯಾರ್ಥಿಗಳಿಂದ ಮಾಹಿತಿ ಪಡೆಯಬಹುದು ಎಂದು ಸಲಹೆ ನೀಡಿದರು.
ಈ ಉದ್ಘಾಟನಾ ಸಮಾರಂಭದಲ್ಲಿ ಶಿಬಿರದ ಸಂಯೋಜಕರಾದ ಡಾ. ಶಂಕರ ಎಂ ಹೆಚ್,ಕಬ್ಬಳಿ ಗ್ರಾಮದ ಸಹ ಸಂಯೋಜಕರಾದ ಡಾ. ಸದಾಶಿವನಗೌಡ ಎಸ್.ಎನ್.ಓ., ಕಾಲೇಜಿನ ಪ್ರಾಧ್ಯಾಪಕ ವೃಂದ,ಗ್ರಾಮ ಪಂಚಾಯತಿ ಅಧ್ಯಕ್ಷರಾದ ಯಶೋಧ ಮಂಜಯ್ಯ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಶ್ರೀ ರವಿ,ರೈತರಾದ ಜಿಂಜೇಗೌಡ,ಶಶಿ ಮತ್ತು ಜಯರಾಮ ಮುಂತಾದವರ ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮದ ರೈತರು ಪಾಲ್ಗೊಂಡಿದ್ದರು.
ಈ ಕೃಷಿ ಮಾಹಿತಿ ಕೇಂದ್ರವು ನವಂಬರ್ 10ರವರೆಗೆ ಕಾರ್ಯನಿರ್ವಹಿಸಲ್ಲಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಶಿಬಿರಾರ್ಥಿಗಳು ಗ್ರಾಮದ ಜನರಲ್ಲಿ ಮನವಿ ಮಾಡಿದರು.