ಬೆಂಗಳೂರು: ತನಿಖಾ ಸಂಸ್ಥೆಗಳು ನಿರ್ವಹಿಸುತ್ತಿರುವ ಕೇಸ್ ಡೈರಿಯನ್ನು ತಿದ್ದುವ ಅಥವಾ ತಿರುಚುವ ಸಾಧ್ಯತೆ ಹಿನ್ನೆಲೆಯಲ್ಲಿ ಡೈರಿಯ ಪ್ರತಿ ಪುಟಕ್ಕೂ ತನಿಖಾಧಿಖಾರಿಯ ಸಹಿ ಹಾಕಲು ನಿರ್ದೇಶನ ನೀಡಬೇಕು ಎಂದು ಕೊಲೆ ಪ್ರಕರಣದ ಆರೋಪಿಯೊಬ್ಬ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.
ನ್ಯಾಯಾಲಯ ಸದ್ಯ ಇರುವ ಕಾನೂನುಗಳಲ್ಲಿ ಕೇಸ್ ಡೈರಿಯಲ್ಲಿ ಸಹಿ ಹಾಕಲು ಅವಕಾಶ ನೀಡುವಂತಹ ನಿಯಮಗಳು ಇಲ್ಲದೇ ಇರುವಾಗ ಹಾಲಿ ಇರುವ ಕಾನೂನುಗಳನ್ನು ವಿಶ್ಲೇಷಣೆ ಮಾಡಬಹುದೇ ಹೊರತು, ವಿಶ್ಲೇಷಣೆ ಹೆಸರಿನಲ್ಲಿ ನ್ಯಾಯಾಲಯಗಳು ಹೊಸ ಕಾನೂನು ಜಾರಿಗೊಳಿಸು ಅವಕಾಶವಿರುವುದಿಲ್ಲ ಎಂದು ಪೀಠ ಹೇಳಿದೆ.
ಎರಡು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಆರೋಪಿ ಮೊಹಮ್ಮದ್ ಶಿಯಾಬ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ್ದ ಏಕ ಸದಸ್ಯಪೀಠದ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿತ್ತು.
ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಅಲ್ಲದೇ, ಅರ್ಜಿದಾರರ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ(ಯುಎಪಿಎ) ಅಡಿ ಪ್ರಕರಣ ದಾಖಲಿಸಲಾಗಿದೆ. ಆದರೆ, ನಿಯಮದಲ್ಲಿ ಎಲ್ಲೂ ಪ್ರತಿ ಪುಟದಲ್ಲೂ ತನಿಖಾಧಿಕಾರಿ ಸಹಿ ಹಾಕಬೇಕು ಎಂಬ ಉಲ್ಲೇಖವಿಲ್ಲ. ಆದ್ದರಿಂದ ನ್ಯಾಯಾಲಯ ಹಾಗೆ ಮಾಡುವಂತೆ ಪದಗಳನ್ನು ಸೇರ್ಪಡೆ ಮಾಡಲಾಗದು. ಹಾಗಾಗಿ ಅರ್ಜಿದಾರ ಮನವಿ ಪುರಸ್ಕರಿಸಲಾಗದು ಎಂದು ವಿಭಾಗೀಯ ಪೀಠ ಸ್ಪಷ್ಟಪಡಿಸಿದೆ.
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ತನಿಖಾಧಿಕಾರಿಗೆ ‘ಕೇಸ್ ಡೈರಿ ಹಾಜರುಪಡಿಸಿ’ ಎಂದು ತನಿಖಾಧಿಕಾರಿಗೆ ನಿರ್ದೇಶನ ನೀಡಿತ್ತು. ಅದರಂತೆ ತನಿಖಾಧಿಕಾರಿ ಕೇಸ್ ಡೈರಿ ಸಲ್ಲಿಸಿ ಅದನ್ನು ವಾಪಸ್ ಪಡೆದುಕೊಂಡಿದ್ದರು. ಇದಕ್ಕೆ ಆರೋಪಿ ಮೊಹಮ್ಮದ್ ಶಿಯಾಬ್ ಮೆಮೊ ಸಲ್ಲಿಸಿ, ‘ಕೇಸ್ ಡೈರಿಯಲ್ಲಿ ಏನಾದರೂ ಸೇರ್ಪಡೆ ಅಥವಾ ತಿದ್ದುಪಡಿ ಮಾಡುವ ಸಾಧ್ಯತೆ ಇದೆ. ಹಾಗಾಗಿ, ತನಿಖಾಧಿಕಾರಿ ಕೋರ್ಟ್‌ಗೆ ಕೇಸ್ ಡೈರಿ ಸಲ್ಲಿಸಿದಾಗ ಅದರ ಪ್ರತಿ ಪುಟದಲ್ಲೂ ಸಹಿ ಹಾಕುವಂತೆ ನಿರ್ದೇಶಿಸಬೇಕು’ ಎಂದು ವಿಚಾರಣಾ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ, ವಿಚಾರಣಾ ನ್ಯಾಯಾಲಯ 2022ರ ನವೆಂಬರ್ 16ರಂದು ಈ ಮನವಿಯನ್ನು ತಿರಸ್ಕರಿಸಿತ್ತು.ಇದನ್ನು ಪ್ರಶ್ನಿಸಿ ಆರೋಪಿ ಹೈಕೋರ್ಟ್ ಮೆಟ್ಟಿಲೇರಿದ್ದರು.