ಕಾನೂನು

ಬಾಲ್ಯ ವಿವಾಹ ನಿಷೇಧ ಎಲ್ಲ ಧರ್ಮಕ್ಕೂ ಅನ್ವಯ: ಹೈಕೋರ್ಟ್ ಮಹತ್ವದ ತೀರ್ಪು

Share It

ಎರ್ನಾಕುಲಂ: ಬಾಲ್ಯ ವಿವಾಹ ನಿಷೇಧ ಕಾಯ್ದೆ-2006 ರ ನಿಯಮಗಳು ಎಲ್ಲ ಧರ್ಮಕ್ಕೂ ಅನ್ವಯವಾಗುತ್ತದೆ. ಅದಕ್ಕೆ ಯಾವ ಧರ್ಮವೂ ಹೊರತಾಗಿಲ್ಲ ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
2012 ರಲ್ಲಿ ನಡೆದಿದ್ದ ವಿವಾಹಕ್ಕೆ ಸಂಬಂಧಿಸಿದಂತೆ ಬಾಲ್ಯ ವಿವಾಹ ಕಾಯ್ದೆ ಅಡಿ ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣ ರದ್ದುಪಡಿಸುವಂತೆ ಕೋರಿ ಪತಿ ಹಾಗೂ ಆತನ ತಂದೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ವಿ ಕುನ್ಹಿಕೃಷ್ಣನ್ ಅವರಿದ್ದ ಪೀಠ ಈ ಆದೇಶ ಹೊರಡಿಸಿದೆ.

ಹೈಕೋರ್ಟ್ ತನ್ನ ತೀರ್ಪಿನಲ್ಲಿ, ಪ್ರತಿಯೊಬ್ಬ ಭಾರತೀಯನೂ ಮೊದಲು ಈ ದೇಶದ ಪ್ರಜೆಯಾಗುತ್ತಾನೆ. ಆ ನಂತರವೇ ಆತ ಧರ್ಮದ ಸದಸ್ಯನಾಗುತ್ತಾನೆ. 2006 ರ ಬಾಲ್ಯ ವಿವಾಹ ನಿಷೇಧ ಕಾಯ್ದೆಯು ಬಾಲ್ಯ ವಿವಾಹವನ್ನು ನಿಷೇಧಿಸಿದೆ. ಇಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನನ್ನು ಅನ್ವಯಿಸಲಾಗದು ಮತ್ತು ವೈಯಕ್ತಿಕ ಕಾನೂನಿಗಿಂತ ಬಾಲ್ಯ ವಿವಾಹ ಕಾಯ್ದೆ ಮೇಲ್ಪಂಕ್ತಿಯಲ್ಲಿದೆ. ಈ ದೇಶದ ಪ್ರತಿಯೊಬ್ಬ ನಾಗರಿಕನೂ ಆತನ ಧರ್ಮಕ್ಕಿಂತ ಮೊದಲು ಈ ನೆಲದ ಕಾನೂನಿಗೆ ಒಳಪಡುತ್ತಾರೆ ಎಂದು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಅಲ್ಲದೇ, ಬಾಲ್ಯ ವಿವಾಹ ನಿಷೇಧ ಕಾಯ್ದೆಯು ಹಿಂದು, ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ ಸೇರಿದಂತೆ ಎಲ್ಲ ದೇಶದ ಎಲ್ಲ ಧರ್ಮೀಯರಿಗೆ ಅನ್ವಯಿಸುತ್ತದೆ ಎಂದು ಸ್ಪಷ್ಟಪಡಿಸಿದೆ.

ಅಲ್ಲದೇ, ಮಕ್ಕಳು ತಮ್ಮ ಬಾಲ್ಯಾವಸ್ಥೆಯಲ್ಲಿ ಓದು, ಪ್ರವಾಸ ಸೇರಿದಂತೆ ಬಾಲ್ಯವನ್ನು ಖುಷಿಯಿಂದ ಅನುಭವಿಸಬೇಕು. ವಿವಾಹವನ್ನು ಅವರು ಕಾನೂನು ಬದ್ಧವಾಗಿ ವಯಸ್ಕರಾದ ನಂತರ ನಿರ್ಧರಿಸಬೇಕು. ಅದು ಬಿಟ್ಟು ಮಕ್ಕಳಿಗೆ ಬಾಲ್ಯ ವಿವಾಹಕ್ಕೆ ಒತ್ತಾಯಿಸಬಾರದು. ಬಹುತೇಕ ಹೆಣ್ಣು ಮಕ್ಕಳು ಓದಿನ ಕಡೆಗೆ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಅದರಂತೆ ಅವರ ಪೋಷಕರು ಮಕ್ಕಳ ಓದು ಮತ್ತು ಸಂತೋಷದ ಕಡೆಗೆ ಗಮನ ನೀಡಬೇಕು. ಬಾಲ್ಯ ವಿವಾಹ ಮಾಡುವ ಮೂಲಕ ಅವರ ಹಕ್ಕುಗಳನ್ನು ಕಸಿದುಕೊಳ್ಳಬಾರದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಹಾಗೆಯೇ ಬಾಲ್ಯ ವಿವಾಹ ಕಾಯ್ದೆಯ ನಿಬಂಧನೆಗಳು ಎಲ್ಲ ಧರ್ಮಗಳಿಗೂ ಅನ್ವಯಿಸುತ್ತದೆ ಎಂಬುದನ್ನು ಮಾಧ್ಯಮಗಳು ವ್ಯಾಪಕವಾಗಿ ಜನರಿಗೆ ತಿಳಿಸಬೇಕು. ಮ್ಯಾಜಿಸ್ಟ್ರೇಟ್ ಗಳಿಗೆ ಇಂತಹ ಪ್ರಕರಣಗಳು ಕಂಡು ಬಂದಾಗ ಅವರು ಸುಮೊಟೊ ಕೇಸ್ ದಾಖಲಿಸಿಕೊಳ್ಳಲು ಸೆಕ್ಷನ್ 13 ರ ಅಡಿ ಅವಕಾಶವಿದ್ದು, ಈ ಅಧಿಕಾರವನ್ನು ಮ್ಯಾಜಿಸ್ಟ್ರೇಟ್ ಗಳು ಚಲಾಯಿಸಲು ಮುಂದಾಗಬೇಕು ಎಂದು ಹೈಕೋರ್ಟ್ ರಾಜ್ಯದ ಎಲ್ಲ ಮ್ಯಾಜಿಸ್ಟ್ರೇಟ್ ಗಳಿಗೆ ಸೂಚಿಸಿದೆ.
ಹೈಕೋರ್ಟ್ ತನ್ನ ತೀರ್ಪಿನ 23ನೇ ಪ್ಯಾರಾದಲ್ಲಿ “I am of the considered opinion that, the provisions of Act 2006, which was subsequently enacted, is applicable to Muslims also as far as child marriage is concerned. This is because of the importance of Act 2006 and also because it is a special Act enacted with a great object. It is true that the Principles of Mahomedan Law by Mulla says that, every Mahomedan of sound mind, who has attained puberty, may 2024:KER:56284 CRL.MC NO. 2515 OF 2016 25 enter into a contract of marriage. But, as I observed earlier, every Indian is a citizen of the country first and thereafter only he becomes a member of the religion. When the Act 2006 prohibits child marriage, it supersedes the Muslim personal law, and every citizen of this country is subject to the law of the land, which is Act 2006, irrespective of his or her religion.” ಎಂದು ಅಭಿಪ್ರಾಯಪಟ್ಟಿದೆ.

2012ರ ಡಿಸೆಂಬರ್ 30 ರಂದು ಕೇರಳದ ಪಾಲಕ್ಕಾಡ್ ನಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಬಾಲಕಿ ಹಾಗೂ ಯುವಕನ ನಡುವೆ ಬಾಲ್ಯ ವಿವಾಹ ನಡೆದಿತ್ತು. ಈ ಹಿನ್ನೆಲೆಯಲ್ಲಿ ಬಾಲಕಿಯ ತಂದೆ(ಎ1) ಹಾಗೂ ಬಾಲಕಿಯನ್ನು ವಿವಾಹವಾದ ಯುವಕ (ಎ2), ವಿವಾಹ ನೆರವೇರಿಸಿದ ಮಸೀದಿಯ ಮುಖ್ಯಸ್ಥರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಆ ಬಳಿಕ ಅರ್ಜಿದಾರರು ತಮ್ಮ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಸೆಕ್ಷನ್ 10 ಹಾಗೂ 11 ರ ಅಡಿ ದಾಖಲಿಸಿರುವ ಎಫ್ಐಆರ್ ಹಾಗೂ ಅದರ ಮುಂದಿನ ವಿಚಾರಣಾ ಪ್ರಕ್ರಿಯೆಯನ್ನು ರದ್ದುಪಡಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಮುಸ್ಲಿ ವೈಯಕ್ತಿಕ ಕಾನೂನಿನ ಪ್ರಕಾರ ಬಾಲಕಿ ಪ್ರೌಢಾವಸ್ಥೆ ತಲುಪಿದಾಗ ವಿವಾಹ ಮಾಡುವುದು ತಪ್ಪಲ್ಲ. ಪ್ರಕರಣದಲ್ಲಿನ ಬಾಲಕಿಗೆ 15 ವರ್ಷ ವಯಸ್ಸಾಗಿದ್ದು, ಆಕೆ ಪ್ರೌಢಾವಸ್ಥೆ ತಲುಪಿದ್ದಾಳೆ. ಹೀಗಾಗಿ ಆಕೆಯ ವಿವಾಹವನ್ನು ಬಾಲ್ಯ ವಿವಾಹ ಎಂದು ಪರಿಗಣಿಸಲಾಗದು ಎಂದು ವಾದಿಸಿದ್ದರು.
CRL.MC NO. 2515 OF 2016
(Source: LAW TIME)


Share It

You cannot copy content of this page