ಕಾನೂನು

SC/ST ಮೀಸಲಾತಿಯಲ್ಲಿ ಒಳ ಮೀಸಲಾತಿ ನೀಡುವುದು ಕಾನೂನುಬದ್ಧವಾಗುತ್ತದೆ: ಸುಪ್ರೀಂ ಕೋರ್ಟ್

Share It

ಹಿಂದುಳಿದ ಸಮುದಾಯಗಳಿಗೆ ಆದ್ಯತೆ ನೀಡುವುದು ಸರ್ಕಾರದ ಕರ್ತವ್ಯ. ಅದರಲ್ಲೂ ಹೆಚ್ಚು ಹಿಂದುಳಿದ ಸಮುದಾಯಗಳಿಗೆ ಆದ್ಯತೆ ನೀಡಬೇಕಾಗುತ್ತದೆ. SC/ST ವರ್ಗದ ಕೆಲವೇ ಜನರು ಮೀಸಲಾತಿಯನ್ನು ಅನುಭವಿಸುತ್ತಿದ್ದಾರೆ. ನೆಲದ ವಾಸ್ತವಗಳನ್ನು ಅಲ್ಲಗಳೆಯುವಂತಿಲ್ಲ ಮತ್ತು ಈ ಜಾತಿಯಲ್ಲೇ ಶತಮಾನಗಳಿಂದ ಹೆಚ್ಚು ದಬ್ಬಾಳಿಕೆಯನ್ನು ಎದುರಿಸುತ್ತಿರುವ ವರ್ಗಗಳಿವೆ. ಹೀಗಾಗಿ ಒಳ ಮೀಸಲಾತಿ ನೀಡುವುದು ಸಮಂಜಸವಾಗಿದೆ” ಎಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಹೇಳಿದೆ.

ಮೀಸಲಾತಿಯು ಒಂದು ವರ್ಗದಲ್ಲಿ ಮೊದಲ ತಲೆಮಾರಿಗೆ ಮಾತ್ರ ಇರಬೇಕು ಮತ್ತು ಎರಡನೇ ತಲೆಮಾರು ಬಂದರೆ ಮೀಸಲಾತಿಯ ಪ್ರಯೋಜನಗಳನ್ನು ನೀಡಬಾರದು ಮತ್ತು ಮೊದಲ ತಲೆಮಾರಿಗೆ ನೀಡಿದ ಮೀಸಲಾತಿಯ ನಂತರ ಎರಡನೇ ತಲೆಮಾರಿನವರು ಸಾಮಾನ್ಯ ವರ್ಗಕ್ಕೆ ಬಂದಿದ್ದಾರೆಯೇ ಎಂಬುದನ್ನು ಸರ್ಕಾರ ಪರಿಶೀಲಿಸಬೇಕು ಎಂದು ಸುಪ್ರೀಂ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಹಾಗೆಯೇ, ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ವ್ಯಕ್ತಿ ಐಎಎಸ್, ಐಪಿಎಸ್ ಅಥವಾ ಐಎಫ್ಎಸ್ ಅಧಿಕಾರಿಗಳಾಗಿ ಉನ್ನತ ಹಂತದ ಸೇವೆಗಳಿಗೆ ಸೇರುತ್ತಾರೆ. ಒಮ್ಮೆ ಅವರು ಐಎಎಸ್, ಐಪಿಎಸ್ ಅಥವಾ ಐಎಫ್ಎಸ್ ಆದ ನಂತರ ಅವರ ಮಕ್ಕಳು ಹಳ್ಳಿಗಳಲ್ಲಿ ವಾಸಿಸುವ ವರ್ಗದ ವ್ಯಕ್ತಿಗಳಿಗೆ ಎದುರಾಗುವಂತಹ ಅನಾನುಕೂಲಗಳನ್ನು ಅನುಭವಿಸುವುದಿಲ್ಲ. ಹಾಗಿದ್ದೂ, ಮೀಸಲಾತಿಯ ಬಲದಿಂದ ಅವರು ಅದನ್ನು ಎರಡನೇ ತಲೆಮಾರಿನಲ್ಲಿ ಅಥವಾ ಮೂರನೇ ತಲೆಮಾರಿನಲ್ಲಿಯೂ ಮೀಸಲಾತಿ ಪಡೆಯಲು ಅರ್ಹರಾಗಿರುತ್ತಾರೆ. ಹೀಗಾಗಿ ಹಿಂದುಳಿದ ವರ್ಗಗಳಲ್ಲೇ ಅತಿ ಹೆಚ್ಚು ಹಿಂದುಳಿದ ವರ್ಗಗಳಿಗೆ ಒಳ ಮೀಸಲು ನೀಡುವುದು ತಪ್ಪಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಎಸ್ಸಿ/ಎಸ್ಟಿಗಳಲ್ಲಿ ಒಳ ಮೀಸಲು ನೀಡುವುದು ಸಂವಿಧಾನದ ವಿಧಿ 14, 15 ಅಥವಾ 341 ರ ಉಲ್ಲಂಘನೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಸುಪ್ರೀಂಕೋರ್ಟ್, ರಾಜ್ಯಗಳು ಈ ಒಳಮೀಸಲನ್ನು ಅತ್ಯಂತ ವಿವೇಚನೆಯಿಂದ ನೀಡಬೇಕು. ಅದು ಬಿಟ್ಟು ತನ್ನ ರಾಜಕೀಯ ಕಾರಣಗಳಿಗೆ ಮನಬಂದಂತೆ ನೀಡಬಾರದು ಎಂದು ಸಿಜೆಐ ಡಿ.ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಬಿ.ಆರ್ ಗವಾಯಿ. ನ್ಯಾ. ವಿಕ್ರಮ್ ನಾಥ್, ನ್ಯಾ. ಬೇಲಾ ಎಂ ತ್ರಿವೇದಿ, ನ್ಯಾ. ಪಂಕಜ್ ಮಿತ್ತಲ್, ನ್ಯಾ. ಮನೋಜ್ ಮಿಶ್ರಾ, ನ್ಯಾ. ಸತೀಶ್ ಚಂದ್ರ ಶರ್ಮಾ ಅವರಿದ್ದ ಸಾಂವಿಧಾನಿಕ ಪೀಠ ಸೂಚಿಸಿದೆ.

(Source: LAW TIME)


Share It

You cannot copy content of this page